ದೇಶ

ಬಿಜೆಪಿ ವಿರುದ್ಧದ ಆರ್ ಜೆಡಿ ಸಮಾವೇಶಕ್ಕೆ ಜೆಡಿಯು ಗೈರು!

Srinivas Rao BV
ಪಾಟ್ನಾ: ಬಿಹಾರದ ಮಹಾಮೈತ್ರಿಯಲ್ಲಿ ಬಿರುಕು ಹೆಚ್ಚಿರುವುದು ಈಗ ಮತ್ತಷ್ಟು ಸ್ಪಷ್ಟವಾಗಿದ್ದು, ಬಿಜೆಪಿ ವಿರುದ್ಧ ಆರ್ ಜೆಡಿ ಆಗಸ್ಟ್ 27 ಕ್ಕೆ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದೆ. 
ಇದು ಆರ್ ಜೆಡಿ ರ್ಯಾಲಿಯಾಗಿದ್ದು, ಜೆಡಿಯು ಒಂದು ಪಕ್ಷವಾಗಿ ಅದರಲ್ಲಿ ಭಾಗಿಯಾಗುವುದಿಲ್ಲ. ಒಂದು ವೇಳೆ ಜೆಡಿಯು ರಾಷ್ಟ್ರಾಧ್ಯಕ್ಷ, ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಆರ್ ಜೆಡಿ ಆಹ್ವಾನ ನೀಡಿದರೆ ವ್ಯಕ್ತಿಗತವಾಗಿ ಸಮಾವೇಶದಲ್ಲಿ ಭಾಗವಹಿಸಬೇಕೋ ಬೇಡವೋ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್ ಹೇಳಿದ್ದಾರೆ. 
ರಾಷ್ಟ್ರಪತಿ ಚುನಾವಣೆಗೆ ಜೆಡಿಯು ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರನ್ನು ಬೆಂಬಲಿಸಿತ್ತು. ಆದರೆ ಜೆಡಿಯು ಮಿತ್ರಪಕ್ಷವಾದ ಆರ್ ಜೆಡಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೆಂಬಲಿಸಿತ್ತು. ಇದಾದ ಬಳಿಕ ಸಂಸತ್ ನಲ್ಲಿ ನಡೆದ ಐತಿಹಾಸಿಕ ಜಿಎಸ್ ಟಿ ಜಾರಿ ಕಾರ್ಯಕ್ರಮಕ್ಕೆ ನಿತೀಶ್ ಕುಮಾರ್ ತಮ್ಮ ಪ್ರತಿನಿಧಿಯನ್ನು ಕಳಿಸಿದ್ದರೆ, ಆರ್ ಜೆಡಿ ಹಾಗೂ ಕಾಂಗ್ರೆಸ್ ಜಿಎಸ್ ಟಿ ಜಾರಿ ಕಾರ್ಯಕ್ರಮವನ್ನು ವಿರೋಧಿಸಿದ್ದವು. ಈ ಎರಡೂ ಪ್ರಕರಣಗಳು ಜೆಡಿಯು ಮತ್ತು ಆರ್ ಜೆಡಿ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನೆ ಮಾಡಿದ್ದವು. ಇದೀಗ ಆರ್ ಜೆಡಿ 2019 ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಬಿಜೆಪಿ ವಿರುದ್ಧ ಬಿಜೆಪಿ ಹಠಾವೋ, ದೇಶ್ ಬಚಾವೋ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ ಜೆಡಿಯು ಮಾತ್ರ ಈ ಸಮಾವೇಶದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದೆ. 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಹರ್ಯಾಣ ಮಾಜಿ ಸಿಎಂ ಓಮ್ ಪ್ರಕಾಶ್ ಚೌಟಾಲಾ, ಜಿಎಸ್ ಟಿ ಜಾರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಹ  ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. 
SCROLL FOR NEXT