ಕೋಲ್ಕತಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕರ್ಣನ್
ನವದೆಹಲಿ: ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೋಲ್ಕತಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತುರ್ತು ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಾಲಯದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶಿಕ್ಷೆಗೆ ಗುರಿಯಾಗಿ ತಲೆಮರೆಸಿಕೊಂಡಿದ್ದ ಕರ್ಣನ್ ಅವರನ್ನು ಜೂನ್.20 ರಂದು ಕೊಯಮತ್ತೂರಿನಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಪ್ರಸ್ತುತ ಕರ್ಣನ್ ಅವರು ಪಶ್ಚಿಮ ಬಂಗಾಳದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಬಂಧನಕ್ಕೊಳಗಾದ ಕೆಲವೇ ಗಂಟೆಗಳ ಬಳಿಕ ಅನಾರೋಗ್ಯ ಕಾರಣದಿಂದಾಗಿ ಕರ್ಣನ್ ಅವರು ಎಸ್ಎಸ್'ಕೆಎಂ ಆಸ್ಪತ್ರೆಗೆ ದಾಖಲಾಗಿ, ನಂತರ ಬಿಡುಗಡೆಯಾಗಿದ್ದರು.
ಪ್ರಕರಣ ಸಂಬಂಧ ಕರ್ಣನ್ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಕರ್ಣನ್ ಪರ ವಕೀಲ ಮಥ್ಯೂಸ್ ನೆಡುರಪ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲೆ ನಡೆಸಲು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ನಮ್ಮ ಆದೇಶದ ವಿರುದ್ಧ ಯಾವುದೇ ರೀತಿಯ ಮೌಖಿಕ ಮನವಿಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ಹೇಳಿದೆ.
ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿಯ ವಿರುದ್ಧ ಸರ್ವೋಚ್ಛ ನ್ಯಾಯಾಲಯ ನ್ಯಾಯಾಂಗ ನಿಂದನೆಯ ನೋಟೀಸ್ ಜಾರಿ ಮಾಡಿತ್ತು.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಕರ್ಣನ್ ಅವರು ಹೊಸ ವಿವಾದ ಸೃಷ್ಟಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ನ್ಯಾಯಾಂಗ ಬಂಧನಕ್ಕೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಮೇ 9ರಂದು ಕರ್ಣನ್ ನಾಪತ್ತೆಯಾಗಿದ್ದರು. ಕರ್ಣನ್ ಅವರನ್ನು ಬಂಧಿಸಲು ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಮುಂದಾಗಿದ್ದರು. ಅಂತಿಮವಾಗಿ ಜೂನ್.20 ರಂದು ಕೊಯಮತ್ತೂರಿನಲ್ಲಿ ಸಿಐಡಿ ಅಧಿಕಾರಿಗಳು ಮತ್ತು ತಮಿಳುನಾಡು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧನಕ್ಕೊಳಪಡಿಸಿದ್ದರು.