ನವದೆಹಲಿ: ಪಾಕಿಸ್ತಾನದ ಟಿವಿ ಚಾನೆಲ್ ಪ್ರಸಾರ ಮಾಡಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಾಲುದ್ದೀನ್ ನ ಸಂದರ್ಶನ, ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಮತ್ತಷ್ಟು ಸಾಬೀತುಪಡಿಸುತ್ತದೆ ಎಂದು ಭಾರತ ಹೇಳಿದೆ.
ಭಾರತದಲ್ಲಿ ಈ ಹಿಂದೆ ಉಗ್ರ ದಾಳಿ ನಡೆಸಿದ್ದೇವೆ ಇನ್ನು ಮುಂದೆಯೂ ಯಾವ ಪ್ರದೇಶದಲ್ಲಿ, ಯಾವ ಸಮಯದಲ್ಲಿ ಬೇಕಾದರೂ ಉಗ್ರ ದಾಳಿ ನಡೆಸುತ್ತೇವೆ ಎಂದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನಾಯಕ ಸಯೀದ್ ಸಲಾಲುದ್ದೀನ್ ಪಾಕ್ ಮಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ, ಸಲಾಲುದ್ದೀನ್ ನ ಸಂದರ್ಶನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ ಎಂದು ಹೇಳಿದೆ.
ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯ ನೀತಿಯನ್ನು ಇನ್ನೂ ಮುಂದುವರೆಸುತ್ತಿದೆ, ಭಯೋತ್ಪಾದಕರ ಮೂಲಕ ನೆರೆ ರಾಷ್ಟ್ರಗಳ ವಿರುದ್ಧ ಪರೋಕ್ಷ ಯುದ್ಧ ನಡೆಸುವ ನೀತಿಯನ್ನು ಅನುಸರಿಸುತ್ತಿದೆ ಎಂಬುದು ಸಂದರ್ಶನದ ಮೂಲಕ ಮತ್ತೆ ಸಾಬೀತಾಗಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖಂಡ ಸಲಾಲುದ್ದೀನ್ ಪಾಕ್ ಮಾಧ್ಯಮಕ್ಕೆ ಸಂದರ್ಶನದಲ್ಲಿ, ಭಯೋತ್ಪಾದನೆ ಮಾಡುವುದಕ್ಕೆ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯವಿದ್ದು, ಆರ್ಥಿಕ ನೆರವೂ ಸಿಗುತ್ತಿದೆ ಎಂಬುದು ಸ್ಪಷ್ಟವಾಗಿತ್ತು.