ಪ್ರಚೋದಿಸಿದರೆ ಭಾರತ 1962 ಕ್ಕಿಂತ ಹೆಚ್ಚು ನಷ್ಟ ಎದುರಿಸಬೇಕಾಗುತ್ತದೆ: ಚೀನಾ ಮಾಧ್ಯಮ
ಸಿಕ್ಕೀಂ ನ ಭಾರತ ಮತ್ತು ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಚೀನಾ ಮಾಧ್ಯಮ ಭಾರತಕ್ಕೆ...
ಬೀಜಿಂಗ್: ಸಿಕ್ಕಿಂ ನ ಭಾರತ ಮತ್ತು ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಚೀನಾ ಮಾಧ್ಯಮ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಪ್ರಚೋದಿಸಿದರೆ ಭಾರತ 1962 ಕ್ಕಿಂತ ಹೆಚ್ಚು ನಷ್ಟ ಎದುರಿಸುತ್ತದೆ ಎಂದು ಹೇಳಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಈ ಎಚ್ಚರಿಕೆ ನೀಡಿದ್ದು, ಚೀನಾದ ಪ್ರದೇಶದಲ್ಲಿ ಭಾರತ ಅತಿಕ್ರಮ ಪ್ರವೇಶ ಮಾಡಿದೆ ಎಂದು ಚೀನಾ ಪತ್ರಿಕೆ ಆರೋಪಿಸಿದೆ. 1962 ಕ್ಕಿಂತ ಈಗಿನ ಭಾರತ ಭಿನ್ನವಾಗಿದೆ ಎಂದು ಜೇಟ್ಲಿ ಹೇಳಿದ ಬೆನ್ನಲ್ಲೇ ಚೀನಾ ಪತ್ರಿಕೆ ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಭಾರತ ಗಡಿ ವಿಚಾರವಾಗಿ ಚೀನಾವನ್ನು ಪ್ರಚೋದಿಸಿದ್ದೇ ಆದರೆ 1962 ಕ್ಕಿಂತ ಹೆಚ್ಚು ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಚೀನಾ ಪ್ರದೇಶದಲ್ಲಿರುವ ಭಾರತೀಯ ಸೇನಾ ಪಡೆಯ ಸಿಬ್ಬಂದಿಗಳನ್ನು ಹೊರಗೆ ಕಳಿಸುವ ಸಾಮರ್ಥ್ಯ ಚೀನಾದ ಪಿಎಲ್ಎ ಗೆ ಇದೆ. ಡೋಕ್ಲಾಂ ಪ್ರದೇಶವನ್ನು ಸೇನಾ ಶಕ್ತಿ ಮೂಲಕ ಹತೋಟಿಗೆ ತೆಗೆದುಕೊಳ್ಳಬಹುದು ಎಂದು ಭಾರತ ಭಾವಿಸಿದ್ದು ಯುದ್ಧಕ್ಕೆ ಸಿದ್ಧ ಎನ್ನುವುದಾದರೆ ಭಾರತ 1962 ಕ್ಕಿಂತ ಹೆಚ್ಚು ನಷ್ಟ ಎದುರಿಸಬೇಕಾಗುತ್ತದೆ. ಆದರೆ ಚೀನಾ ಶಾಂತಿಯುತವಾಗಿ ವಿವಾದ ಬಗೆಹರಿಸಿಕೊಳ್ಳುವುದನ್ನು ಬಯಸುತ್ತದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.