ಕೋಲ್ಕತಾ: ತಮ್ಮ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ ಆರೋಪ ಆಧಾರ ರಹಿತ ಎಂದಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಕೆ.ಎನ್.ತ್ರಿಪಾಠಿ ಅವರು, ಮಮತಾ ಭಾವನಾತ್ಮಕವಾಗಿ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ನಿನ್ನೆ ರಾಜ್ಯಪಾಲರು ತಮಗೆ ಬೆದರಿಕೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ರಾಜ್ಯಪಾಲರು, ಮುಖ್ಯಮಂತ್ರಿಗಳು ನನ್ನ ವಿರುದ್ಧ ಆಧಾರ ರಹಿತ ಆರೋಪದ ಮಾಡುವ ಬದಲು ತಾವು ಮತ್ತು ತಮ್ಮ ಸಂಪುಟ ಸಹೋದ್ಯೋಗಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಿದರೆ ಒಳ್ಳೆದು ಎಂದು ತಿರುಗೇಟು ನೀಡಿದ್ದಾರೆ.
ರಾಜಭವನ ರಾಜ್ಯ ಸರ್ಕಾರದ ಇಲಾಖೆ ಅಲ್ಲ. ರಾಜ್ಯದ ಪ್ರತಿ ಪ್ರಜೆಯೂ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಇಲ್ಲ ಮುಕ್ತ ಅವಕಾಶವಿದೆ ಎಂದು ತ್ರಿಪಾಠಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜಭವನ ಬಿಜೆಪಿ ಅಥವಾ ಆರ್ ಎಸ್ಎಸ್ ಕಚೇರಿಯಾಗುತ್ತಿದೆ ಎಂದು ಹೇಳುವುದು ತಪ್ಪು ಎಂದು ರಾಜ್ಯಪಾಲರು ಹೇಳಿದ್ದಾರೆ.