ದೇಶ

ಕೆಲವು 'ಕೆಟ್ಟ' ನಟಿಯರಿಂದ ಕೆಲಸಕ್ಕಾಗಿ ಸೆಕ್ಸ್: ಕೇರಳ ಸಂಸದ, ನಟನ ಹೇಳಿಕೆ

Sumana Upadhyaya
ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಯಿಲ್ಲ. ಇಂತಹ ಸನ್ನಿವೇಶಗಳಿದ್ದರೆ ಅದಕ್ಕೆ ಕೆಟ್ಟ ಬುದ್ದಿಯ ಹೆಂಗಸರೇ ಕಾರಣವಾಗಿರಬಹುದು ಎಂದು ಹೇಳುವ ಮೂಲಕ  ನಟ ಹಾಗೂ ರಾಜಕಾರಣಿ ಇನ್ನೊಸೆಂಟ್ ವರೇಡ್ ತೆಕ್ಕತಾಲ ವಿವಾದ ಸೃಷ್ಟಿಸಿದ್ದಾರೆ.
ಚಿತ್ರೋದ್ಯಮದಲ್ಲಿ ನಟಿಯರು ವೃತ್ತಿಯಲ್ಲಿ ಬೆಳೆಯಲು, ಹೆಸರು ಗಳಿಸಲು ಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು ಹೇಳಿದಂತೆ ಕೇಳಬೇಕಾಗುತ್ತದೆ. ಅವರಿಗೆ ಲೈಂಗಿಕ ಒಲವು ತೋರಿಸಬೇಕಾಗುತ್ತದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿರುವ ಸಂದರ್ಭದಲ್ಲಿ ಈ ಮಾತುಗಳನ್ನಾಡುವ ಮೂಲಕ ವಿವಾದ ಎಬ್ಬಿಸಿದ್ದಾರೆ.
ಇನ್ನೊಸೆಂಟ್ ಕೇರಳದ ತ್ರಿಶೂರು ಜಿಲ್ಲೆಯ ಚಾಲಕುಡಿ ಕ್ಷೇತ್ರದ ಸಂಸದ ಮಲಯಾಳಂ ಚಿತ್ರರಂಗದ ಅಮ್ಮ ಸಂಘಟನೆಯ ಅಧ್ಯಕ್ಷರು ಕೂಡ ಹೌದು. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಹೇಳುವುದು ನಿಜವಲ್ಲ. ಬಹಳ ಹಿಂದೆ ಅದು ಇದ್ದಿತೇನೋ, ಈಗ ಅದಿಲ್ಲ. ಯಾರಾದರೂ ನಟಿಯೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವ, ಬರೆಯುವ ಮುನ್ನ  ಪತ್ರಕರ್ತರು ನಿಜ ವಿಷಯವೇನೆಂದು ತಿಳಿದುಕೊಳ್ಳಬೇಕು. ನಟಿಯರ ವರ್ತನೆ, ಗುಣ ಕೆಟ್ಟದಾಗಿದ್ದರೆ ಅವರು ನಿರ್ದೇಶಕರು, ನಿರ್ಮಾಪಕರು ಅಥವಾ ಬೇರೊಬ್ಬ ಪುರುಷರ ಜೊತೆ ಬೆಡ್ ಹಂಚಿಕೊಳ್ಳುತ್ತಾರೆ ಎಂದು ಇನ್ನೊಸೆಂಟ್ ಹೇಳಿದ್ದಾರೆ.
ಮಲಯಾಳಂ ಚಿತ್ರೋದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಸಂಪ್ರದಾಯವಿದೆಯೇ ಎಂದು ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ ಹೀಗೆ ಹೇಳಿದ್ದಾರೆ.ಇವರ ಈ ಹೇಳಿಕೆಗೆ ಚಿತ್ರೋದ್ಯಮದ ಮಹಿಳೆಯರು ಸಾಮೂಹಿಕವಾಗಿ ಖಂಡಿಸಿದ್ದು, ಚಿತ್ರನಟಿಯಾಗಿ ಗುರುತಿಸಿಕೊಳ್ಳಲು ಮತ್ತು ಬೆಳೆಯಲು ಬಯಸುವವರು ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ನಂತರ ಇನ್ನೊಸೆಂಟ್ ತಮ್ಮ  ಫೇಸ್ ಬುಕ್ ಖಾತೆಯಲ್ಲಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ತಾವು ಹೇಳಲು ಉದ್ದೇಶಿಸಿದ್ದರ ವಿರುದ್ಧವಾಗಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಸಂಘಟನೆ ಖಂಡನೆ: ಆದರೆ ಮಲಯಾಳಂ ಚಿತ್ರೋದ್ಯಮದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್(wcc) ಎಂಬ ಸಂಘಟನೆ ಸಂಸದ ಹಾಗೂ ನಟರ ಹೇಳಿಕೆಯನ್ನು ಅಲ್ಲಗಳೆದಿದೆ.   
ಕಾಸ್ಟಿಂಗ್ ಕೌಚ್ ಸಂಪ್ರದಾಯ ಚಿತ್ರೋದ್ಯಮದಲ್ಲಿ ಇದ್ದು ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ತನಿಖಾ ಆಯೋಗವನ್ನು ನೇಮಿಸಬೇಕು ಎಂದು ಒತ್ತಾಯಿಸಿದೆ.
ಅಮ್ಮಾ ಸಂಘಟನೆಯ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತೇವೆ. ಅನೇಕ ಮಹಿಳೆಯರು ಸಿನಿಮಾ ಕ್ಷೇತ್ರಕ್ಕೆ ಬಂದವರು ಅನೇಕ ರೀತಿಯ ಶೋಷಣೆಗಳಿಗೊಳಗಾಗಬೇಕಾಗುತ್ತದೆ ಎಂದು ಮಹಿಳಾ ಸಂಘಟನೆ ಫೇಸ್ ಬುಕ್ ನಲ್ಲಿ ಖಂಡಿಸಿದೆ.
ಇತ್ತೀಚೆಗೆ ಕೆಲ ನಟಿಯರು ನಮ್ಮ  ಬಳಿ ಬಂದು ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಹೇಮಾ ಆಯೋಗ ಈ ಕುರಿತು ದಕ್ಷ ತನಿಖೆ ನಡೆಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಕಳೆದ ಮೇ ತಿಂಗಳಲ್ಲಿ ಕೇರಳ ಸರ್ಕಾರ, ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ತನಿಖೆ ನಡೆಸಿ ಸಹಾಯ ಮಾಡಲು ಹೈಕೋರ್ಟ್ ಮಾಜಿ ನ್ಯಾಯಾಧೀಶೆ ಕೆ.ಹೇಮಾ ನೇತೃತ್ವದಲ್ಲಿ ಆಯೋಗವನ್ನು ಸ್ಥಾಪಿಸಿತ್ತು. ಆಯೋಗ ಸ್ಥಾಪನೆಗೆ  ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಮುಖಂಡರು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ವುಮೆನ್ ಇನ್ ಸಿನಿಮಾದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ನಟ, ನಿರ್ದೇಶಕರು, ಬರಹಗಾರರು, ಸಂಗೀತಗಾರರು ಇದ್ದಾರೆ.
ಕೊಚ್ಚಿಯಲ್ಲಿ ಕೆಲ ತಿಂಗಳ ಹಿಂದೆ ಮಲಯಾಳಂನ ಖ್ಯಾತ ನಟಿಯೊಬ್ಬರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಂತರ ಕೇರಳ ಸರ್ಕಾರ ಆಯೋಗವನ್ನು ರಚಿಸಿತ್ತು.
SCROLL FOR NEXT