ನವದೆಹಲಿ: ಹ್ಯಾಮ್ ಬರ್ಗ್ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ-ಕ್ಸಿ ಭೇಟಿಗೆ ಇದು ಸೂಕ್ತ ಸಮಯ ಅಲ್ಲ ಎಂದಿದ್ದ ಚೀನಾಗೆ ಭಾರತ ಖಡಕ್ ಆಗಿಯೇ ಉತ್ತರವನ್ನು ನೀಡಿದ್ದು, ಕ್ಸಿ ಜಿನ್'ಪಿಂಗ್ ಜೊತೆಗೆ ದ್ವಿಪಕ್ಷೀಯ ಚರ್ಚೆ ಕೇಳಿದ್ದು ಯಾರು? ಎಂದು ಪ್ರಶ್ನಿಸಿದೆ.
ಹ್ಯಾಮ್ ಬರ್ಗ್' ಜಿ-20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖಾಮುಖಿಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಚೀನಾ, ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮೋದಿ ಹಾಗೂ ಜಿನ್ ಪಿಂಗ್ ನಡುವೆ ಯಾವುದೇ ರೀತಿಯ ಮಾತುಕತೆ ನಡೆಯುವುದಿಲ್ಲ. ಮಾತುಕತೆಗೆ ಇದು ಸೂಕ್ತ ಸಮಯವಲ್ಲ ಎಂದು ಹೇಳಿತ್ತು.
ಪದೇ ಪದೇ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ಚೀನಾಗೆ ಭಾರತ ಸರಿಯಾಗಿಯೇ ಉತ್ತರ ನೀಡಿದ್ದು, ಇಷ್ಟಕ್ಕೂ ದ್ವಿಪಕ್ಷೀಯ ಚರ್ಚೆ ಕುರಿತು ಸಭೆ ನಡೆಸಿ ಎಂದು ಯಾರು ಕೇಳಿದರು? ದ್ವಿಪಕ್ಷೀಯ ಸಭೆ ನಡೆಸುವಂತೆ ನಾವು ಚೀನಾವನ್ನು ಕೇಳಿಯೇ ಇಲ್ಲ. ಹೀಗಾಗಿ ಸೂಕ್ತ ವಾತಾವರಣದ ಪ್ರಶ್ನೆಯೇ ಮೂಡುವುದಿಲ್ಲ. ಚೀನಾ ಅಧ್ಯಕ್ಷರೊಂದಿಗೆ ಭಾರತ ಪ್ರತ್ಯೇಕ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದೆ.
ಜರ್ಮನಿಯ ಹ್ಯಾಮ್ ಬರ್ಗ್ ನಲ್ಲಿ ಇಂದಿನಿಂದ ಜಿ-20 ಶೃಂಗಸಭೆ ಆರಂಭವಾಗುತ್ತಿದೆ. ಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ-ಜಿನ್ ಪಿಂಗ್ ಅವರು ಮುಖಾಮುಖಿಯಾಗುತ್ತಿದ್ದಾರೆ.
ಸಿಕ್ಕಿಂ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವನ್ನು ಬೆದರಿಸುವ ಪ್ರಯತ್ನಗಳನ್ನು ಚೀನಾ ಮಾಡುತ್ತಲೇ ಇದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡಲು ಗಡಿಯಲ್ಲಿ ಸೇನೆಯ ನಿಯೋಜನೆಯೇ ಕಾರಣವಾಗಿದ್ದು, ಶಾಂತಿ ಬೇಕಿದ್ದರೆ, ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿ ಇಲ್ಲವೇ ಯುದ್ಧವನ್ನು ಎದುರಿಸಲಿ ಎಂದು ಎಂದು ಚೀನಾ ಈ ಹಿಂದೆ ಎಚ್ಚರಿಸಿತ್ತು. ಚೀನಾದ ಈ ಬೆದರಿಕೆಗಳಿಗೆ ಭಾರತ ಕೂಡ ಸರಿಯಾಗಿಯೇ ಉತ್ತರವನ್ನು ನೀಡುತ್ತಿದೆ.
ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.ಜೂನ್ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.