ದೇಶ

ಐಐಟಿಗಳಲ್ಲಿ ಕೌನ್ಸೆಲಿಂಗ್ ಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಆದೇಶ

Sumana Upadhyaya
ನವದೆಹಲಿ: ಈ ವರ್ಷ ಜಂಟಿ ಪ್ರವೇಶ ಪರೀಕ್ಷೆ ನಂತರ ಮುಂದಿನ ಆದೇಶ ಬರುವವರೆಗೆ ಕೌನ್ಸೆಲಿಂಗ್ ನಡೆಸದಂತೆ ಅಥವಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಂತೆ ದೇಶಾದ್ಯಂತ ಭಾರತೀಯ ತಾಂತ್ರಿಕ ಸಂಸ್ಥೆಗೆ ಸುಪ್ರೀಂ ಕೋರ್ಟ್ ಇಂದು ತಡೆಹಿಡಿದಿದೆ.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಎ.ಎಮ್.ಖನ್ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠ, ಇಂದಿನಿಂದ ಐಐಟಿಗಳಲ್ಲಿ ಕೌನ್ಸೆಲಿಂಗ್ ಮತ್ತು ಪ್ರವೇಶಕ್ಕೆ ಸಂಬಂಧಪಟ್ಟಂತೆ ಯಾವುದೇ ರಿಟ್ ಅರ್ಜಿಗಳನ್ನು ಸ್ವೀಕರಿಸದಂತೆ ಕೂಡ ಹೈಕೋರ್ಟ್ ಗಳಿಗೆ ತಡೆಯೊಡ್ಡಿದೆ.
ಹೈಕೋರ್ಟ್ ಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳ ವಿವರ, ಐಐಟಿ-ಜಂಟಿ ಪ್ರವೇಶ ಪರೀಕ್ಷೆ 2017ರ ರ್ಯಾಂಕ್ ಪಟ್ಟಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಖ್ಯೆಗಳ ವಿವರಗಳನ್ನು ಮತ್ತು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ನೀಡಲಾದ ಹೆಚ್ಚುವರಿ ಅಂಕಗಳ ವಿವರಗಳನ್ನು ಕೂಡ ನ್ಯಾಯಾಲಯ ಕೋರಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 10ಕ್ಕೆ ನಿಗದಿಪಡಿಸಿದೆ.
ಐಐಟಿ-ಜೆಇಇ 2017 ರ್ಯಾಂಕ್ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಪಟ್ಟಂತೆ ಕಳೆದ ತಿಂಗಳು 30ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿತ್ತು.
ಜೆಇಇ 2017ನೇ ಸಾಲಿನ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಬೋನಸ್ ಅಂಕಗಳನ್ನು ನೀಡುವ ಕ್ರಮ ತಪ್ಪಾಗಿದ್ದು ಇದರಿಂದ ಅಭ್ಯರ್ಥಿಗಳ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಐಐಟಿ ಪ್ರವೇಶ ಕೋರಿದ ಐಶ್ವರ್ಯಾ ಅಗರ್ವಾಲ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಜೆಇಇ ಅಂಕಗಳನ್ನು ಸರಿಪಡಿಸಿದ ನಂತರ ಅಖಿಲ ಭಾರತ ರ್ಯಾಂಕ್ ನ್ನು ತಯಾರಿಸುವಂತೆ ಮತ್ತು ತಪ್ಪಾದ ಪ್ರಶ್ನೆಗಳಿಗೆ ಸರಿ ಉತ್ತರ ನೀಡಲು ಪ್ರಯತ್ನಿಸಿದ ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡುವಂತೆ ಕೂಡ ನ್ಯಾಯಾಲಯ ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
SCROLL FOR NEXT