ರಿಲಯನ್ಸ್ ಜಿಯೊ (ಚಿತ್ರ-ರಾಯಿಟರ್ಸ್)
ನವದೆಹಲಿ:ಭಾರತ ದೇಶದ 120 ದಶಲಕ್ಷಕ್ಕೂ ಅಧಿಕ ರಿಲಯನ್ಸ್ ಜಿಯೊ ಗ್ರಾಹಕರ ಅಂಕಿಅಂಶ, ದತ್ತಾಂಶಗಳು ವೆಬ್ ಸೈಟ್ ವೊಂದಕ್ಕೆ ಸೋರಿಕೆಯಾಗಿವೆ. ಮ್ಯಾಜಿಕ್ಪ್ಯಾಕ್ ಎಂಬ ವೆಬ್ ಸೈಟ್ ಗೆ ಜಿಯೊ ಗ್ರಾಹಕರ ಮೊದಲ ಹೆಸರು, ಕೊನೆಯ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಸರ್ಕಲ್, ಸಿಮ್ ಆಕ್ಟಿವೇಶನ್ ದಿನಾಂಕ, ಆಧಾರ್ ಸಂಖ್ಯೆ ಇತ್ಯಾದಿ ಮಾಹಿತಿಗಳು ಸಿಕ್ಕಿವೆ ಎಂದು ವೆಬ್ ಸೈಟ್ ವರದಿ ಮಾಡಿದೆ. ಇದು ಭಾರತದಲ್ಲಿಯೇ ಇಲ್ಲಿಯವರೆಗೆ ಅತಿದೊಡ್ಡ ದತ್ತಾಂಶ ಸೋರಿಕೆ ಎಂದು ಹೇಳಬಹುದಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಿಮ್ ಆಕ್ಟಿವೇಶನ್ ಗೆ ಗ್ರಾಹಕರ ಆಧಾರ್ ಸಂಖ್ಯೆಯನ್ನು ಬಳಸುವ ಕೆಲವು ಟೆಲಿಕಾಮ್ ಆಪರೇಟರ್ ಗಳಲ್ಲಿ ರಿಲಯನ್ಸ್ ಜಿಯೊ ಒಂದಾಗಿದೆ.
ಗಮನಾರ್ಹ ಅಂಶವೆಂದರೆ ಫೆಬ್ರವರಿ 2017ರ ಹೊತ್ತಿಗೆ 100 ದಶಲಕ್ಷಕ್ಕೂ ಅಧಿಕ ಗ್ರಾಹಕರು ರಿಲಯನ್ಸ್ ಜಿಯೊ ಪಡೆದಿದ್ದರು. ದತ್ತಾಂಶಗಳ ಸೋರಿಕೆ ಗ್ರಾಹಕರ ಮೇಲಾದರೆ ಇದು ನಿಜಕ್ಕೂ ಭಾರತದಲ್ಲಿ ಇದುವರೆಗೆ ಆದ ಬಹುದೊಡ್ಡ ದತ್ತಾಂಶ ಸೋರಿಕೆಯಾಗಿದೆ.
ಈ ಭಾರೀ ದತ್ತಾಂಶ ಸೋರಿಕೆ ಬಗ್ಗೆ Fonearena.com ಎಂಬ ಟೆಕ್ ವೆಬ್ ಸೈಟ್ ಮೊದಲಿಗೆ ವರದಿ ಮಾಡಿತ್ತು. ಈ ವೆಬ್ ಸೈಟ್ ನ ಸಂಪಾದಕ ವರುಣ್ ಕೃಷ್ ಇಂಡಿಯನ್ ಎಕ್ಸ್ ಪ್ರೆಸ್. ಕಾಂಗೆ ಪ್ರತಿಕ್ರಿಯೆ ನೀಡಿ, ತಮ್ಮ ಮತ್ತು ತಮ್ಮ ಕೆಲವು ಸಹೋದ್ಯೋಗಿಗಳ ವೈಯಕ್ತಿಕ ಮಾಹಿತಿಗಳು http://magicapk.com ವೆಬ್ ಸೈಟ್ ನಲ್ಲಿ ನೀಡಿದಾಗ ತಮಗೆ ನಿಜಕ್ಕೂ ಆಘಾತವುಂಟಾಯಿತು. ಸರ್ಚ್ ಬಾಕ್ಸ್ ನಲ್ಲಿ ತಮ್ಮ ಜಿಯೊ ನಂಬರ್ ಹಾಕಿ ಹುಡುಕಿದಾಗ ತಮ್ಮೆಲ್ಲ ವೈಯಕ್ತಿಕ ಮಾಹಿತಿಗಳು ಸಿಕ್ಕಿದವು ಎನ್ನುತ್ತಾರೆ.
ಜಿಯೊ ಸಿಮ್ ನ ಪ್ರಿವ್ಯು ಆಫರ್ ಪಡೆದ ಗ್ರಾಹಕರ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ ಎಂದು fonearena.com ತಿಳಿಸಿದೆ.
ಈ ಬಗ್ಗೆ ಜಿಯೊ ಕಂಪೆನಿ ಮುಖ್ಯಸ್ಥರ ಪ್ರತಿಕ್ರಿಯೆ ಪಡೆಯಲು ಎನ್ ಡಿಟಿವಿ ಗ್ಯಾಜೆಟ್ಸ್ 360 ಸಂಪರ್ಕಿಸಿದಾಗ, ಜಿಯೊ ವಕ್ತಾರರು, ಈ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು ಗ್ರಾಹಕರ ಒಪ್ಪಿಗೆಯಿಲ್ಲದೆ ಅವರ ಮಾಹಿತಿಗಳನ್ನು ಹಂಚಿಕೊಳ್ಳಲು ಅಥವಾ ಬಹಿರಂಗಪಡಿಸಲಾಗುವುದಿಲ್ಲ. Fonarena.com ಒದಗಿಸಿದ ಅಂಕಿಅಂಶಗಳು ಅನಧಿಕೃತವಾಗಿರಬಹುದು ಎಂದು ವಕ್ತಾರರು ಹೇಳಿದ್ದಾರೆ.
ಕಳೆದ ರಾತ್ರಿ ಸುಮಾರು 11.40ರ ಹೊತ್ತಿಗೆ ಪ್ರಶ್ನೆಗಳು ಹೆಚ್ಚೆಚ್ಚು ಬರಲು ಆರಂಭವಾದಾಗ ವೆಬ್ ಸೈಟ್ ಆಫ್ ಲೈನ್ ಆಯಿತು. ಮಧ್ಯರಾತ್ರಿ 12.45ರ ಹೊತ್ತಿಗೆ ವೆಬ್ ಸೈಟ್ ಸಂಪೂರ್ಣವಾಗಿ ರದ್ದಾಯಿತು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್.ಕಾಂ ವೆಬ್ ಸೈಟ್ ಪರೀಕ್ಷಿಸಿದಾಗ ಖಾತೆಯನ್ನು ರದ್ದುಪಡಿಸಿದ್ದರಿಂದ ಅದು ಸಿಗುತ್ತಿರಲಿಲ್ಲ.
ಈ ವೆಬ್ ಸೈಟ್ ನ್ನು ಡೊಮೇನ್ ನೀಡುವ godaddy.com ಈ ವರ್ಷ ಮೇ 18ರಂದು ದಾಖಲಾತಿ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.