ನವದೆಹಲಿ: ಸಿಕ್ಕಿಂನ ಡೊಕ್ಲಾಂ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಪ್ರತಿಷ್ಟಿತ ಮಲಬಾರ್ ತ್ರಿರಾಷ್ಟ್ರ ನೌಕಾ ಸಮರಾಭ್ಯಾಸ ಆರಂಭ ಸೋಮವಾರ ಆರಂಭವಾಗಿದೆ.
ಚೀನಾ ಖ್ಯಾತೆ ತೆಗೆಯುಚ್ಚಿರುವ ಹಿಂದೂ ಮಹಾಸಾಗರದಲ್ಲೇ ಭಾರತ-ಅಮೆರಿಕ- ಜಪಾನ್ ರಾಷ್ಟ್ರಗಳ ಸಮರಾಭ್ಯಾಸ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿದೆ. ಅತ್ತ ಸಿಕ್ಕಿಂನಲ್ಲಿ ಚೀನಾ ಮತ್ತು ಕಾಶ್ಮೀರದಲ್ಲಿ ಪಾಕಿಸ್ಥಾನ ಭಾರತವನ್ನು ಕೆಣಕುತ್ತಿರುವಂತೆಯೇ ನಡೆಯುತ್ತಿರುವ ಈ ಅಭ್ಯಾಸ ಹೆಚ್ಚು ಗಮನ ಸೆಳೆದಿದೆ. ಬಂಗಾಳ ಕೊಲ್ಲಿಯ ಸಾಗರದಲ್ಲಿ ಸಮರಾಭ್ಯಾಸ ನಡೆಯುತ್ತಿದ್ದು, ಈ ಬಾರಿಯ ಸಮರಾಭ್ಯಾಸದಲ್ಲಿ 20ಕ್ಕೂ ಅಧಿಕ ಯುದ್ಧ ನೌಕೆಗಳು ಭಾಗವಹಿಸಿವೆ.
ದಕ್ಷಿಣ ಚೀನ ಸಮುದ್ರ ವ್ಯಾಪ್ತಿಯಲ್ಲಿರುವ ದ್ವೀಪ ಸಮೂಹದ ಮೇಲೆ ಚೀನಾ ಈಗಾಗಲೇ ಸ್ಥಾಪಿಸಿದ ಆಧಿಪತ್ಯಕ್ಕೆ ನಿಯಂತ್ರಣ ಹೇರುವುದು ಈ ಸಮರಾಭ್ಯಸದ ಮುಖ್ಯ ಗುರಿಯಾಗಿದೆ ಎಂದು ಹೇಳಲಾಗುತ್ತಿದ್ದು, ಅಂತೆಯೇ ಹಾಲಿ ಸಮರಾಭ್ಯಾಸದ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ನೀಡದಂತೆ ಪರೋಕ್ಷ ಎಚ್ಚರಿಕೆ ಹಾಗೂ ಭಾರತ-ಚೀನಾ ನಡುವಿನ ಹಾಲಿ ಗಡಿ ತಂಟೆಯ ಮೇಲೆ ಪ್ರಭಾವ ಬೀರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
1992ರಿಂದ ಭಾರತ ಮತ್ತು ಅಮೆರಿಕ ನಡುವೆ ಜಂಟಿ ಸಮರಾಭ್ಯಾಸ ಶುರುವಾಗಿತ್ತು. ಬಳಿಕ 1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ ಸಮರಾಭ್ಯಾಸ ಸ್ಥಗಿತಗೊಂಡಿತು. ಇದೀಗ ಭಾರತದೊಂದಿಗಿನ ಸಮರಾಭ್ಯಸಕ್ಕೆ ಜಪಾನ್ ಕೂಡ ಸೇರಿಕೊಂಡಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಭಾರತದ ಪರವಾಗಿ ನೌಕಾಪಡೆಯ ದೊಡ್ಡ ಯುದ್ಧ ವಿಮಾನ ವಾಹಕ ಐಎನ್‌ಎಸ್ ವಿಕ್ರಮಾದಿತ್ಯ, ಮಿಗ್ 29ಕೆ ವಿಮಾನ, 02- ಶಿವಾಲಿಕ್ ಯುದ್ಧ ನೌಕೆ, ಐಎನ್‌ಎಸ್ ಜ್ಯೋತಿ, ಪಿ8ಐ ಕಣ್ಗಾವಲು ಯುದ್ಧ ವಿಮಾನ, ಸಬ್‌ಮೆರಿನ್ ದಾಳಿ ಎದುರಿಸುವ ಸಣ್ಣ ನೌಕೆಗಳು ಪಾಲ್ಗೊಂಡಿವೆ. ಅಂತೆಯೇ ಅಮೆರಿಕದಿಂದ ವಿಶ್ವದ ಅತ್ಯಂತ ದೊಡ್ಡ ಯುದ್ಧ ನೌಕೆ ಯುಎಸ್‌ಎಸ್ ನಿಮಿಟ್ಜ್, ಕ್ಷಿಪಣಿ ವಾಹಕ ನೌಕೆ ಯುಎಸ್‌ಎಸ್ ಪ್ರಿನ್ಸ್‌ಟನ್, ಯುಎಸ್‌ಎಸ್ ಹೊವಾರ್ಡ್, ಕ್ಷಿಪಣಿ ನಾಶಕ ನೌಕೆಗಳಾದ ಶೌಪ್ ಮತ್ತು ಕಿಡ್, ಲಾಸ್ ಏಂಜಲಿಸ್ ಸಬ್‌ಮೆರಿನ್, ಪಿ-8ಎ ಪೊಸೈಡಾನ್ ಯುದ್ಧ ವಿಮಾನಗಳು ಪಾಲ್ಗೊಂಡಿವೆ.
ಇನ್ನು ಜಪಾನ್ ದೇಶದ ವತಿಯಿಂದ ಜೆಎಸ್ ಇಜೊಮೋ ಯುದ್ಧ ನೌಕೆ, ಜೆಎಸ್ ಸಜಾನಮಿ ಯುದ್ಧ ನೌಕೆಗಳು ಪಾಲ್ಗೊಂಡಿವೆ ಎಂದು ತಿಳಿದುಬಂದಿದೆ.
ಗುಪ್ತಚರ ನೌಕೆ ನಿಯೋಜಿಸಿದ ಚೀನಾ
ಸಮರಾಭ್ಯಾಸದಲ್ಲಿ ಜಪಾನ್ ಭಾಗವಹಿಸಿದ್ದು ಚೀನವನ್ನು ಕೆರಳಿಸಿದೆ. ಡ್ರೋನ್ ಮೂಲಕ ಯಾವ ರೀತಿ ಅಭ್ಯಾಸ ನಡೆಯಲಿದೆ ಮತ್ತು ತನ್ನ ಅತಿ ದೊಡ್ಡ ಗುಪ್ತಚರ ನೌಕೆಯನ್ನೇ ಅಭ್ಯಾಸ ಪ್ರದೇಶಕ್ಕೆ ಈಗಾಗಲೇ ಕಳುಹಿಸಿದೆ.