ಉಗ್ರರು ದಾಳಿ ನಡೆಸಿದ್ದ ಸ್ಥಳದಲ್ಲಿರುವ ಭದ್ರತಾ ಸಿಬ್ಬಂದಿ
ನವದೆಹಲಿ: ನಿಯಮ ಉಲ್ಲಂಘನೆ ಹಾಗೂ ಬೇಜವಾಬ್ದಾರಿತನವೇ ಅಮರನಾಥ ಯಾತ್ರಾರ್ಥಿಗಳ ಮೇಲಿನ ಉಗ್ರ ದಾಳಿಗೆ ಕಾರಣವಾಯಿತು ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಉಗ್ರರು ದಾಳಿ ಸಂಚು ಹಿನ್ನಲೆಯಲ್ಲಿ ಅಮರನಾಥ ಯಾತ್ರಾರ್ಥಿಗಳಿಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ, ಉಗ್ರರ ದಾಳಿಗೊಳಗಾದ ಬಸ್ ಅಮರನಾಥ ದೇಗುಲ ಮಂಡಳಿಯಿಂದ ನೋಂದಾಯಿತವಾದ ಬಸ್ ಆಗಿರಲಿಲ್ಲ. ಯಾತ್ರೆಗೆ ಬರುವ ಪ್ರತಿಯೊಂದು ಬಸ್ ಗೂ ಭದ್ರತೆಯನ್ನು ಒದಗಿಸಲಾಗುತ್ತದೆ. ಇದು ಕಡ್ಡಾಯ ನಿಯಮವಾಗಿದೆ. ಆದರೆ, ಯಾತ್ರೆಗೆ ಬಸ್ ನಿಯಮಗಳನ್ನು ಉಲ್ಲಂಘಿಸಿತ್ತು. ನೋಂದಾವಣಿಯಿಲ್ಲದ ಕಾರಣ ಬಸ್ ನಲ್ಲಿ ಭದ್ರತೆಯಿರಲಿಲ್ಲ. ಹೀಗಾಗಿಯೇ ಉಗ್ರರು ದಾಳಿ ನಡೆಸಲು ದಾರಿ ಮಾಡಿಕೊಟ್ಟಂತಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿ ಬಳಿಕ ಪ್ರಾಥಮಿಕ ತನಿಖೆ ನಡೆಸಿರುವ ಅಧಿಕಾರಿಗಳು ಮಾಹಿತಿ ನೀಡಿದ್ದು, ಅಮರನಾಥನ ದರ್ಶನ ಪಡೆದುಕೊಂಡ ಗುಜರಾತ್ ಯಾತ್ರಿಕರು ಸೋನ್ ಮಾರ್ಗ್ ನಿಂದ ಬಸ್ಸಲ್ಲಿ (ಜಿಜೆ09ಝಡ್9976) ವಾಪಸಾಗುತ್ತಿದ್ದು. ಈ ವೇಳೆ ಸುಮಾರು ದ್ವಿಚಕ್ರ ವಾಹನದಲ್ಲಿ ಬಂದಿರುವ ಉಗ್ರರು ಬೈಕ್ ನಲ್ಲಿ ಆಗಮಿಸಿ ಮೊದಲು ಬೊಟೆಂಗೂನಲ್ಲಿನ ಬುಲೆಟ್ ಪ್ರೂಫ್ ಬಂಕರ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಪ್ರತಿದಾಳಿಗೆ ಅಂಜಿ ಪರಾರಿಯಾಗಿದ್ದಾರೆ.
ನಂತರ ಅವರಿಗೆ ಪೊಲೀಸ್ ಜೀಪು ಖಾನ್ನಾಬಾಲ್ ಎಂಬಲ್ಲಿ ಎದುರಾಗಿದ್ದು, ಅದರ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ, ಪೊಲೀಸರು ಪ್ರತಿಯಾಗಿ ದಾಳಿ ಮಾಡಿದ್ದಾರೆ. ನಂತರ ಉಗ್ರರಿಗೆ ಅಮರನಾಥ ಯಾತ್ರಾರ್ಥಿಕರಿದ್ದ ಗುಜರಾತ್ ನೋಂದಣಿಯ ಬಸ್ಸು ರಾತ್ರಿ 8.30ರ ಸುಮಾರಿಗೆ ಎದುರು ಸಿಕ್ಕಿದೆ. ಈ ವೇಳೆ ಬಸ್ಸಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ನಿಯಮವಾಳಿ ಪ್ರಕಾರ ರಾತ್ರಿ 7ರ ನಂತರ ಅಮರನಾಥ ಯಾತ್ರಿಕರ ಬಸ್ಸು ಎಲ್ಲೂ ತೆರಳುವಂತಿಲ್ಲ. ಆದರೂ ನಿಯಮ ಉಲ್ಲಂಘಿಸಿ ಬಸ್ ತೆರಳುತ್ತಿತ್ತು. ಅಲ್ಲದೆ, ಅಮರನಾಥ ದೇಗುಲ ಮಂಡಳಿಯಿಂದ ನೋಂದಾಯಿತವಾದ ಬಸ್ ಅದಾಗಿರಲಿಲ್ಲ. ಗುಜರಾತ್ ಮೂಲದ ಯಾತ್ರಿಕರು ತಾವೇ ಸಿದ್ಧತೆ ಮಾಡಿಕೊಂಡ ಗುಜರಾತ್ ಬಸ್ ಆಗಿತ್ತು. ಅಧಿಕೃತ ಬಸ್ ಆಗಿದ್ದರೆ, ಅದಕ್ಕೆ ಸಿಆರ್ ಪಿಎಫ್ ಭದ್ರತೆ ಲಭಿಸುತ್ತಿತ್ತು ಎಂದು ಹೇಳಿದ್ದಾರೆ.