ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು
ಶ್ರೀನಗರ: ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಅಮರನಾಥ ಯಾತ್ರೆಗೆ ತೆರಳಿದ್ದ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ 7 ಯಾತ್ರಿಕರು ಸಾವನ್ನಪ್ಪಿ 32ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ.
ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ಇರುವ ಹಿನ್ನಲೆಯಲ್ಲಿ ಉಗ್ರರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆಂದು ಕೆಲ ದಿನಗಳ ಹಿಂದಷ್ಟೇ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. 100ರಿಂದ 150 ಯಾತ್ರಾರ್ಥಿಗಳು ಮತ್ತು 100 ಪೊಲೀಸ್ ಸಿಬ್ಬಂದಿಯ ಹತ್ಯೆ ಮಾಡಲು ಉಗ್ರರು ಯೋಜನೆ ಹೊಂದಿದ್ದಾರೆಂದು ತಿಳಿಸಿತ್ತು.
ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಭದ್ರತೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆಗೆ 40 ಸಾವಿರ ಅರೆ ಮಿಲಿಟರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಉಪಗ್ರಹ ವ್ಯವಸ್ಥೆ, ಡ್ರೋನ್ ಕಣ್ಗಾವಲು ಇಡಲಾಗಿತ್ತು. ಭಾರೀ ಭದ್ರತೆಯ ನಡುವೆಯೂ ಉಗ್ರರು ದಾಳಿ ನಡೆಸಿರುವುದು ಜನರಲ್ಲಿರುವ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ಉಗ್ರರು ನಡೆದಿದ್ದ ದಾಳಿಸಿರುವುದು ಇದು ಮೊದಲೇನಲ್ಲ. 17 ವರ್ಷದ ಹಿಂದೆ ಕೂಡ ಇದೇ ರೀತಿಯ ದಾಳಿ ನಡೆದಿತ್ತು.
2000ನೇ ಆಗಸ್ಟ್ 1ರಂದು ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಅಂದು 30 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಂ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ 30 ಮಂದಿ ಯಾತ್ರಿಕರು ಹತ್ಯೆಗೀಡಾಗಿದ್ದರು. ಈ ವೇಳೆ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪಹಲ್ಗಾಂ ಗೆ ಭೇಟಿ ನೀಡಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯೇ ಕಾರಣ ಎಂದು ಆರೋಪಿಸಿದ್ದರು.
ಇನ್ನು ಉಗ್ರರ ದಾಳಿ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಮುಂದೂಡಲಾಗಿದೆ ಎಂಬ ಗುಮಾನಿಗಳು ಕೇಳಿಬರತೊಡಗಿವೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಸರ್ಕಾರ ಮಾಹಿತಿಯನ್ನು ನೀಡಿಲ್ಲ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸೇವೆ ಸ್ಥಗಿತ
ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ದಾಳಿ ನಡೆಸಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ಸಾವಿನ ವರ್ಷಾಚರಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜು. 6 ರಿಂದ 9 ರವರೆಗೂ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ನಿನ್ನೆಯಷ್ಟೇ ಮತ್ತೆ ಇಂಟರ್ನೆಟ್ ಸೇವೆಗಳನ್ನು ಪುನರ್ ಆರಂಭಗೊಳಿಸಿತ್ತು. ಉಗ್ರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.