ನವದೆಹಲಿ: ಬ್ಯಾಂಕ್ ನಲ್ಲಿ ಜಮಾ ಆಗಿರುವ ರದ್ದುಗೊಂಡ 500, 1000 ರೂ ಮುಖಬೆಲೆಯ ನೋಟುಗಳನ್ನು ಇನ್ನೂ ಎಣಿಕೆ ಮಾಡುತ್ತಿದ್ದೇವೆ ಎಂದು ಸಂಸದೀಯ ಸಮಿತಿಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಮಾಹಿತಿ ನೀಡಿದ್ದಾರೆ.
ಜು.12 ರಂದು ಸಂಸದೀಯ ಸಮಿತಿ ಸಭೆಗೆ ಹಾಜರಾಗಿ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿರುವ ಉರ್ಜಿತ್ ಪಟೇಲ್ ಹಾಗೂ ಆರ್ ಬಿಐ ನ ಪ್ರತಿನಿಧಿಗಳು, ಬ್ಯಾಂಕ್ ಗಳಿಗೆ ವಾಪಸ್ ಬಂದಿರುವ ರದ್ದುಗೊಂಡಿದ್ದ ನೋಟುಗಳ ಎಣಿಕೆ ಕಾರ್ಯ ಮುಂದುವರೆದಿದೆ. ಕೆಲಸದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಹೊಸ ಕರೆನ್ಸಿ ವೇರಿಫಿಕೇಷನ್ ಪ್ರೊಸೆಸಿಂಗ್ ಸಿಸ್ಟಂ (ಸಿವಿಪಿಎಸ್) ನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ ಎಂದು ಉರ್ಜಿತ್ ಪಟೇಲ್ ಹೇಳಿದ್ದಾರೆ.
ವೀರಪ್ಪ ಮೋಯ್ಲಿ ನೇತೃತ್ವದ ಹಣಕಾಸಿಗೆ ಸಂಬಂಧಿಸಿದ ಸ್ಥಾಯಿಸಮಿತಿ ಸದಸ್ಯರು ಆರ್ ಬಿಐ ಗೌರ್ನರ್ ನೀಡಿದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2019 ರ ವೇಳೆಗಾದರೂ( ಪ್ರಧಾನಿ ಮೋದಿ ಅವರ ಆಡಳಿತ ಪೂರ್ಣಗೊಳ್ಳುವ ಅವಧಿ) ನೋಟು ಎಣಿಕೆ ಕಾರ್ಯ ಪೂರ್ಣಗೊಳ್ಳುತ್ತಾ? ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರ್ ಬಿಐ ಗೌರ್ನರ್ ನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ 57 ಸಿವಿಪಿಎಸ್ ನಿಂದ ಹಳೆಯ ನೋಟುಗಳ ಎಣಿಕೆ ಕಾರ್ಯ ನಡೆಯುತ್ತಿದ್ದು, ವಾರದಲ್ಲಿ 6 ದಿನಗಳು 2 ಪಾಳಿಗಳಲ್ಲಿ ನೋಟುಗಳ ಎಣಿಕೆ ಕಾರ್ಯ ನಡೆಯುತ್ತಿದ್ದು, ಎಣಿಕೆ ಕಾರ್ಯ ಮುಗಿದ ನಂತರ ಎಷ್ಟು ಹಳೆಯ ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ ಬಂದಿದೆ ಎಂಬುದನ್ನು ತಿಳಿಸಲು ಸಾಧ್ಯ ಎಂದು ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.