ಶ್ರೀನಗರ: ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಶಾಸಕರೊಬ್ಬರ ವಾಹನ ಚಾಲಕನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಪಿಡಿಪಿ ಶಾಸಕ ಐಜಾಜ್ ಅಹ್ಮದ್ ಮಿರ್ ಅವರ ಚಾಲಕನನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಜು.10 ರಾತ್ರಿ 8.20 ಸುಮಾರಿಗೆ ಉಗ್ರರ ಗುಂಪೊಂದು ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿ ನಡೆಸಿತ್ತು. ಬ್ಯಾಟೆಂಗೂ ಹಾಗೂ ಖಾನಾಬಾಲ್ ಗಳಲ್ಲಿ ಶಸ್ತ್ರಸಜ್ಜಿದ ಭಯೋತ್ಪಾದಕರ ಗುಂಪು ಪೊಲೀಸ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿತ್ತು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಸಿಲುಕಿಕೊಂಡಿತ್ತು. ಉಗ್ರರು ಮನೋಇಚ್ಛೆ ನಡೆಸಿದ್ದ ಗುಂಡಿನ ದಾಳಿಗೆ 7 ಯಾತ್ರಿಗಳು ಸಾವನ್ನಪ್ಪಿದ್ದರು.
ಯಾತ್ರಾರ್ಥಿಗಳ ಮೇಲಿನ ಉಗ್ರರ ದಾಳಿ ಪ್ರಕರಣವನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಯಾತ್ರಾರ್ಥಿಗಳಿದ್ದ ಬಸ್ ಹಾಗೂ ಅದು ಹೋಗುತ್ತಿದ್ದ ಮಾರ್ಗದ ಬಗ್ಗೆ ಉಗ್ರರಿಗೆ ಯಾರು ಮಾಹಿತಿ ನೀಡಿದ್ದರು: ಉಗ್ರರಿಗೆ ವಾಹನ ನೀಡಿದವರು ಯಾರು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.