ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ದಿನ ಕಳೆಯುತ್ತಿದ್ದಂತೆ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದು, ಕಾಶ್ಮೀರದಲ್ಲಿನ ಅಸ್ಥಿರತೆ ಅಂತ್ಯಗೊಳಿಸಲು ತಮ್ಮ ಅಧಿಕಾರವನ್ನು ಬಳಸಿಕೊಳ್ಳಿ ಎಂದು ದೆಹಲಿಯ ಜಮ್ಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹ್ಮದ್ ಬುಖಾರಿ ಪಾಕ್ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.
ಪಾಕ್ ಪ್ರಧಾನಿಗೆ ಪತ್ರ ಬರೆದಿರುವ ಸಯ್ಯದ್ ಅಹ್ಮದ್ ಬುಖಾರಿ, ಹಿರಿಯತ್ ನಾಯಕರೊಂದಿಗೆ ಮಾತುಕತೆ ಪ್ರಾರಂಭಿಸುವ ಮೂಲಕ ಕಾಶ್ಮೀರದಲ್ಲಿನ ಅಸ್ಥಿರತೆಯನ್ನು ಅಂತ್ಯಗೊಳಿಸುವಂತೆ ಆಗ್ರಹಿಸಿದ್ದಾರೆ. ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ. ಪರಿಣಾಮ ಭಾರತ-ಪಾಕಿಸ್ತಾನದ ನಡುವಿನ ಸಂಬಂಧವೂ ಹದಗೆಡುತ್ತಿದೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ತಡ ಮಾಡಿದಷ್ಟೂ ಕಾಶ್ಮೀರದಲ್ಲಿನ ಪರಿಸ್ಥಿತಿಯೂ ತೀವ್ರವಾಗಿ ಹದಗೆಡುತ್ತಾ ಹೋಗುತ್ತಿದೆ ಎಂದು ಸಯ್ಯದ್ ಅಹ್ಮದ್ ಬುಖಾರಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಕಾಶ್ಮೀರವನ್ನು ಅಪಾಯ ಘಟ್ಟದಿಂದ ಹೊರತರಲು ಹಾಗೂ ಶಾಂತಿ ಸ್ಥಾಪನೆ ಮಾಡಲು ಬುದ್ಧಿವಂತಿಕೆಯಿಂದ ನಡೆದುಕೊಳ್ಳಬೇಕಿದೆ. ಕಾಶ್ಮೀರದಲ್ಲಿರುವ ಸಾಮಾನ್ಯ ಜನತೆ ಇಂದು ಆತಂಕದಲ್ಲಿ, ಅಸಹಾಯಕತೆಯಿಂದ ಜೀವನ ನಡೆಸುತ್ತಿದ್ದಾರೆ. ಶಾಂತಿ ಕುರಿತಂತೆ ಅವರಲ್ಲಿರುವ ಕನಸು ನಶಿಸಿ ಹೋಗುತ್ತಿದೆ.
ಆಹ್ಲಾದಕರ ಜೀವನಕ್ಕೆ ಹೆಸರುವಾಸಿಯಾಗಿದ್ದ ಶಾಂತಿಯುತ ಕಣಿವೆ ಇಂದು ಸಾವಿರಾರು ಜನರು ವಾಸಿಸುತ್ತಿರುವ ಕಣ್ಣೀರಿನ ಕಣಿವೆಯಾಗಿ ನಿರ್ಮಾಣವಾಗಿದೆ. ಎಕೆ-47 ನೆರಳು, ರಕ್ತಪಾತದಿಂದ ಕೂಡಿದ ಕಣಿವೆಯಾಗಿದೆ. ಸಾವಿನ ಆಟಗಳು ಕಾಶ್ಮೀರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ. ಕಾಶ್ಮೀರದಲ್ಲಿಂದು ಶಾಂತಿ ಹಾಗೂ ಸಂಧಾನಗಳೇ ವಾಸ್ತವಿಕ ಅವಲಂಬನೆಗಳಾಗಬೇಕಿದೆ ಎಂದು ತಿಳಿಸಿದ್ದಾರೆ.