ದೇಶ

ಭಾಗವತ್'ರನ್ನು ಉಗ್ರರ ಪಟ್ಟಿಗೆ ಸೇರಿಸಲು ಯುಪಿಎ ಯತ್ನ ನಡೆಸಿತ್ತು: ವರದಿಗಳ ವಿರುದ್ಧ ಕಾಂಗ್ರೆಸ್ ತೀವ್ರ ಕಿಡಿ

Manjula VN
ನವದೆಹಲಿ: ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು 'ಹಿಂದೂ ಭಯೋತ್ಪಾದಕ' ಪಟ್ಟಿಗೆ ಸೇರಿಸಲು ಯುಪಿಎ ಸರ್ಕಾರ ಯತ್ನ ನಡೆಸಿತ್ತಲ್ಲದೇ, 2014ರಲ್ಲಿ ರಾಷ್ಟ್ರೀಯ ತನಿಖಾ ದಳದ ಮೇಲೆ ಒತ್ತಡ ಹೇರಿತ್ತು ಎಂಬ ವರದಿಗಳ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ಕಿಡಿಕಾರಿದೆ. 
ಅಜ್ಮೀರ್ ಮತ್ತು ಮಲೆಗಾಂವ್ ಸ್ಫೋಟದ ಬಳಿಕ ಅಂದಿನ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮೊದಲ ಬಾರಿಗೆ ಹಿಂದೂ ಉಗ್ರರು ಎಂಬ ಪದ ಬಳಸಿ, ಇದರ ಅಡಿಯಲ್ಲಿ ಭಾಗವತ್ ಅವರನ್ನು ವಿಚಾರಣೆಗೊಳಪಡಿಸುವಂತೆ ರಾಷ್ಟ್ರೀಯ ತನಿಖಾದಳ (ಎನ್ಐಎ)ದ ಮೇಲೆ ಒತ್ತಡ ಹೇರಿತ್ತು ಎಂದು ಕೆಲ ಖಾಸಗಿ ಮಾಧ್ಯಮಗಳು ವರದಿ ಮಾಡಿತ್ತು. 
ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ವರದಿಗಳು ಸಂಪೂರ್ಣ ಸುಳ್ಳು. ದೇಶದಲ್ಲಿ ಪ್ರಚೋದನಾಕಾರಿ ವಾತಾವರಣ ನಿರ್ಮಾಣ ಮಾಡಲು ಈ ರೀತಿಯ ಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 
ದೇಶದಲ್ಲಿ ಭದ್ರತೆ ಹಾಗೂ ಸಾರ್ವಭೌಮತ್ವವನ್ನು ಕಾಪಾಡಲು ಸರ್ಕಾರ ಎಲ್ಲವನ್ನೂ ಮಾಡಿದೆ. ಅಧಿಕಾರಕ್ಕೆ ಬರುವ ಪ್ರತೀ ಸರ್ಕಾರವೂ ಈ ಕೆಲಸವನ್ನು ಮಾಡುತ್ತದೆ. ಅಧಿಕಾರದಲ್ಲಿದ್ದಾಗ ನಮ್ಮ ಸರ್ಕಾರ ಕೂಡ ಅದನ್ನೇ ಮಾಡಿದ್ದು ಎಂಬುದನ್ನು ಈ ಮೂಲಕ ಖಾತ್ರಿ ಪಡಿಸುತ್ತೇನೆ. 
ಈ ರೀತಿಯ ಆಯ್ದ ಮಾಹಿತಿಗಳನ್ನು ಯಾರು ನೀಡುತ್ತಿದ್ದಾರೆ. ದೇಶದಲ್ಲಿ ಪ್ರಚೋದನಾಕಾರಿ ವಾತಾವರಣ ನಿರ್ಮಾಣ ಮಾಡಲು ಈ ರೀತಿಯ ಯತ್ನಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ತನಿಖೆ ನಡೆಸುವ ಪ್ರಶ್ನೆ ಎಲ್ಲಿ ಬಂದು ಎಂದು ತಿಳಿಸಿದ್ದಾರೆ.  
SCROLL FOR NEXT