ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಬಾದುಷ್ ಜೈಲಿನಲ್ಲಿರಬಹುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಹೇಳಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವಾರಾಜ್, ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಹಾಗೂ ವಿ.ಕೆ ಸಿಂಗ್ ಅವರು ಇಂದು ಇರಾಕ್ ನಲ್ಲಿ ನಾಪತ್ತೆಯಾಗಿರುವ 39 ಭಾರತೀಯರ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಸುವ ಸುಷ್ಮಾ ಸ್ವರಾಜ್ ಅವರು, ನಾಪತ್ತೆಯಾಗಿರುವ ಭಾರತೀಯರ ಕುಟುಂಬಸ್ಥರನ್ನು ನಾನು ಈ ಹಿಂದೆ ಕೂಡ ಹಲವು ಬಾರಿ ಭೇಟಿ ಮಾಡಿದ್ದೇನೆ. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಇಸಿಸ್ ಕಪಿಮುಷ್ಟಿಯಿಂದ ಮೊಸುಲ್ ಸ್ವತಂತ್ರಗೊಂಡಿದೆ ಎಂದು ಈ ಹಿಂದೆ ಇರಾಕ್ ಪ್ರಧಾನಿ ಮಂತ್ರಿ ಘೋಷಣೆ ಮಾಡಿದ್ದರು. ಈ ಘೋಷಣೆ ಬಳಿಕ ಇರಾಕ್ ಭೇಟಿ ನೀಡುವಂತೆ ವಿ.ಕೆ.ಸಿಂಗ್ ಅವರಿಗೆ ಸೂಚನೆ ನೀಡಿದ್ದೆ. ಆದರೆ, ಈಗಲೂ ಇರಾಕ್'ನ ಪಶ್ಚಿಮ ಮೊಸುಲ್ ನಲ್ಲಿ ಹೋರಾಟಗಳು ಮುಂದುವರೆಯುತ್ತಿರುವುದಾಗಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಕೆಲ ಮೂಲಗಳು ನಾಪತ್ತೆಯಾಗಿರುವ ಭಾರತೀಯರು ಇರಾಕ್ ನ ಬಾದುಷ್ ಜೈಲಿನಲ್ಲಿದ್ದಾರೆಂದು ವಿ.ಕೆ.ಸಿಂಗ್ ಅವರಿಗೆ ತಿಳಿಸಿದ್ದಾರೆ. ಪ್ರಸ್ತುತ ಬಾದುಷ್'ನಲ್ಲಿ ಹೋರಾಟಗಳು ಮುಂದುವರೆದಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆಗಳು ಅಂತ್ಯಗೊಂಡ ಬಳಿಕ ಭಾರತೀಯರನ್ನು ಪತ್ತೆ ಮಾಡುವ ಕಾರ್ಯಗಳನ್ನು ಆರಂಭಿಸಲಾಗುತ್ತದೆ. ಜು.24 ರಂದು ಇರಾಕ್ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭೇಟಿ ಬಳಿಕ ಮತ್ತಿತರ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.