ದೇಶ

ಪ್ರತಿಪಕ್ಷಗಳಿಗೆ ಹೊಸ ಆಸ್ತ್ರವಾದ ಡೋಕ್ಲಾಮ್ ವಿವಾದ, ಅಮರನಾಥ ಉಗ್ರರ ದಾಳಿ!

Manjula VN

ನವದೆಹಲಿ: ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಅಶಾಂತಿ, ಚೀನಾದೊಂದಿಗಿನ ಸಂಘರ್ಷ, ಅಮರನಾಥ ಯಾತ್ರಾರ್ಥಿಗಳ ಮೇಲಿನ ಉಗ್ರರ ದಾಳಿ ಮೊದಲಾದ ವಿಷಯಗಳ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯಲು ವಿರೋಧ ಪಕ್ಷಗಳು ಸಿದ್ಧತೆಗಳನ್ನು ನಡೆಸಿವೆ.


ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಚುನಾವಣೆ ಕುರಿತು ಅಭ್ಯರ್ಥಿಯನ್ನು ಘೋಷಣೆ ಮಾಡಲು ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ಒಗ್ಗೂಡಿದ್ದ 18 ವಿರೋಧ ಪಕ್ಷಗಳು, ಇದೀಗ ಸಂಸತ್ ನಲ್ಲಿ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲೂ ಚೀನಾದೊಂದಿಗಿನ ಗಡಿ ವಿವಾದ, ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಅಶಾಂತಿ, ರೈತರ ಆತ್ಮಹತ್ಯೆ, ಗೋರಕ್ಷಕರ ಮೇಲಿನ ದಾಳಿ ಕುರಿತಂತೆ ಕೇಂದ್ರದ ವಿರುದ್ಧ ಟೀಕಾಸ್ತ್ರ ನಡೆಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ವಿರೋಧ ಪಕ್ಷಗಳು ಈ ಬಗ್ಗೆ ಸ್ಪಷ್ಟನೆಗಳನ್ನು ನೀಡಿದ್ದು, ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಗಳ ಚುನಾವಣೆಯನ್ನು ಹೊರತುಪಡಿಸಿ ಕಾಂಗ್ರೆಸ್, ಸಿಪಿಐ(ಎಂ), ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಬಿಎಸ್'ಪಿ, ಜನತಾ ದಳ-ಸಂಯುಕ್ತ, ರಾಷ್ಟ್ರೀಯ ಜನತಾ ದಳ ಮತ್ತು ಡಿಎಂಕೆ ಸೇರಿದಂತೆ ಇನ್ನಿತರೆ ಪಕ್ಷಗಳು ಸಂಸತ್ತಿನಲ್ಲಿ ದೇಶದ ವಿವಿಧ ಸಮಸ್ಯೆಗಳ ಕುರಿತಂತೆ ಕೇಂದ್ರವನ್ನು ಗುರಿಯಾಗಿರಿಸಲಾಗುತ್ತದೆ ಎಂದು ಹೇಳಿಕೊಂಡಿವೆ.  

ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡು ತಿಂಗಳುಗಳೇ ಕಳೆದರೂ ಈ ವರೆಗೂ ವಿವಾದ ಸಂಬಂಧ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ಈಗಲೂ ಮುಂದುವರದಿವೆ. ಇದಲ್ಲದೆ, ಗುಪ್ತಚರ ಇಲಾಖೆ ಮಾಹಿತಿ ನಡುವೆಯೂ ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ದಾಳಿ ನಡೆಸಿರುವುದು ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ವಿರೋಧ ಪಕ್ಷಗಳ ಕಣ್ಣು ಮತ್ತಷ್ಟು ಕೆಂಪಗಾಗುವಂತೆ ಮಾಡಿದೆ. 

ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಮೇಲೆ ಪರಿಣಾಮ ಬೀರುವ ಪ್ರತೀ ವಿಚಾರವೂ 125 ಕೋಟಿ ಭಾರತೀಯ ಪರಿಣಾಮ ಬೀರಲಿದೆ. ಜವಾಬ್ದಾರಿಯುತ ಹಾಗೂ ತತ್ವಗಳನ್ನು ಹೊಂದಿರುವ ವಿರೋಧ ಪಕ್ಷವಾಗಿರುವ ನಾವು ಪ್ರತೀಯೊಂದು ವಿಚಾರದ ಬಗ್ಗೆಯೂ ದನಿಯೆತ್ತಬೇಕಿದೆ ಎಂದು ಹೇಳಿದ್ದಾರೆ. 

ಸರಕು ಮತ್ತು ಸೇವಾ ತೆರಿಗೆ ವಿಚಾರವನ್ನು ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಈ ಹಿಂದೆಯೇ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಹೇಳಿದ್ದರು. ಪೆಟ್ರೋಲ್, ವಿದ್ಯುತ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮವನ್ನು ಜಿಎಸ್ ಟಿ ಅಡಿಯಲ್ಲಿ ತಂದಿರುವ ವಿಚಾರದ ಬಗ್ಗೆ ನಾವು ಸಂಸತ್ತಿನಲ್ಲಿ ದನಿಯೆತ್ತುತ್ತೇವೆ. ಇದಲ್ಲದೆ, ರೈತರ ಆತ್ಮಹತ್ಯೆ ಪ್ರಕರಣ, ಮಂಡಸೌರ್ ಗೋಲಿಬಾರ್ ಪ್ರಕರಣದ ಕುರಿತಂತೆಯೂ ಚರ್ಚೆ ನಡೆಸುತ್ತೇವೆಂದು ತಿಳಿಸಿದ್ದಾರೆ. 
SCROLL FOR NEXT