ನವದೆಹಲಿ: ಲಿವರ್ ನಲ್ಲಿ ಟ್ಯೂಮರ್ ಸಮಸ್ಯೆ ಎದುರಾಗಿರುವ ಪಾಕ್ ಆಕ್ರಮಿತ ಕಾಶ್ಮೀರ ವಿದ್ಯಾರ್ಥಿಗೆ ವೈದ್ಯಕೀಯ ವೀಸಾ ಪಡೆಯಲು ಪಾಕಿಸ್ತಾನವೇ ಅಡ್ಡಿಯಾಗಿ ಪರಿಣಮಿಸಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಭಾರತೀಯ ಹೈಕಮಿಷನ್ ಗೆ ಪತ್ರ ಬರೆಯಲು ನಿರಾಕರಿಸುತ್ತಿರುವುದೇ ಇದಕ್ಕೆ ಕಾರಣ.
ಸರ್ತಾಜ್ ಅಜೀಜ್ ಭಾರತೀಯ ಹೈಕಮಿಷನ್ ಗೆ ಪತ್ರ ಬರೆಯಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ರಾವಲಕೋಟ್ ನ ನಿವಾಸಿಯಾಗಿರುವ ಒಸಾಮ ಅಲಿ ಅವರ ಕುಟುಂಬ ಭಾರತೀಯ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಮೊರೆ ಹೋಗಿದ್ದು, ಪಾಕಿಸ್ತಾನದ ಸಲಹೆಗಾರರಿಂದ ವೈದ್ಯಕೀಯ ವೀಸಾ ಶಿಫಾರಸ್ಸು ಪತ್ರಕ್ಕೆ ವಿನಾಯಿತಿ ನೀಡುವಂತೆ ಒಸಾಮ ಅಲಿ ಕುಟುಂಬ ಸದಸ್ಯರು ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದಾರೆ.