ದೇಶ

ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಹೂಗುಚ್ಛ ನೀಡುವಂತಿಲ್ಲ: ಗೃಹ ಸಚಿವಾಲಯ

Shilpa D
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವಾಗ ಹೂ ಗುಚ್ಚಗಳನ್ನು ನೀಡುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಹೂ ಗುಚ್ಚದ ಬದಲು ಹೂವು, ಖಾದಿ ಕರವಸ್ತ್ರ ಅಥವಾ ಪುಸ್ತಕವನ್ನು ಉಡುಗೊರೆಯಾಗಿ ಕೊಡಿ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ದೇಶದ ಒಳಗೆ ಪ್ರಧಾನಿ ಪ್ರವಾಸ ಕೈಗೊಂಡಾಗ ಅವರನ್ನು ಸ್ವಾಗತಿಸಲು ಹೂಗುಚ್ಛ ಬೇಡ ಎಂಬುದು ಅಧಿಕಾರಿಗಳ ಆಶಯ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳು ಈ ನಿರ್ದೇಶನವನ್ನು ಪಾಲಿಸಬೇಕು ಎಂದು ಸಚಿವಾಲಯ ಹೇಳಿದೆ.
ಅತಿಥಿಗಳನ್ನು ಸ್ವಾಗತಿಸುವಾಗ ಕೆಲವು ದಿನಗಳ ನಂತರ ಕಸದಬುಟ್ಟಿ ಸೇರುವ ಹೂಗುಚ್ಛದ ಬದಲಾಗಿ ಪುಸ್ತಕ ಮತ್ತು ಖಾದಿ ಕರವಸ್ತ್ರ ಕೊಡಬಹುದು ಎಂದು ಮೋದಿಯವರು ಜೂನ್ 25 ರ ಮನ್ ಕಿ ಬಾತ್’ನಲ್ಲಿ ಹೇಳಿದ್ದರು.
ಖಾದಿ ಕರವಸ್ತ್ರ ಕೊಡುವುದರಿಂದ ಕರಕುಶಲಕರ್ಮಿಗಳಿಗೆ ಸಹಾಯವಾಗುತ್ತದೆ. ಪುಸ್ತಕಗಳನ್ನು ಉಡುಗೊರೆ ನೀಡುವುದರಿಂದ ಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸಕ್ಕೆ ಪ್ರೇರೇಪಿಸಿದಂತಾಗುತ್ತದೆ ಮತ್ತು ಇವು ಹೆಚ್ಚು ಕಾಲ ನಮ್ಮೊಂದಿಗಿರುತ್ತದೆ’ ಎಂದು ಹೇಳಿದ್ದರು.
ಜುಲೈ 12 ರಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಈ ನಿಯಮ ಹೊರಡಿಸಲಾಗಿದೆ. 
ಇನ್ನೂ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಸ್ವಾಗತಿಸಿದ್ದಾರೆ. ನಾಯಕರನ್ನು ಸ್ವಾಗತಿಸಲು ಹೂವುಗಳ ಸಾಮೂಹಿಕ ಹತ್ಯಾಕಾಂಡ ಮಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ. 
SCROLL FOR NEXT