ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು
ನವದೆಹಲಿ: ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಸಾವಿರಕ್ಕೂ ಅಧಿಕ ಸರ್ಕಾರೇತರ ಸಂಘಟನೆಗಳನ್ನು ನಿಷೇಧಿಸಲಾಗಿದ್ದು, ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (ಎಫ್ ಸಿಆರ್ಎ) ಅಡಿಯಲ್ಲಿ ಸುಮಾರು 2,000 ಸಂಘಟನೆಗಳಿಗೆ ನಿಗದಿತ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸಲು ಹೇಳಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾವಿರಕ್ಕೂ ಅಧಿಕ ಸರ್ಕಾರೇತರ ಸಂಘಟನೆಯನ್ನು ಗುರುತಿಸಲಾಗಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ ಅಡಿ ಗೊತ್ತುಪಡಿಸಿದ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸಲು ನಿರ್ದೇಶಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ನಿನ್ನೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2,000ಕ್ಕೂ ಅಧಿಕ ಸರ್ಕಾರೇತರ ಸಂಘಟನೆಗಳ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸಲು ಸೂಚಿಸಲಾಗಿದ್ದು, ಈ ಎನ್ ಜಿಒಗಳ ಪಟ್ಟಿ www.fcraonline.nic.inನಲ್ಲಿ ಲಭ್ಯವಾಗುತ್ತದೆ.
2011ರ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ಎಲ್ಲಾ ಬ್ಯಾಂಕುಗಳು ವಿದೇಶಿ ಹಣ ಸಂದಾಯ ಮತ್ತು ಖಾತೆಗಳಲ್ಲಿನ ವಹಿವಾಟುಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕು. ವಿದೇಶಿ ವ್ಯಕ್ತಿ ನೀಡಿದ ಹಣ, ಸರ್ಕಾರೇತರ ಸಂಘಟನೆ ದಾಖಲಾತಿ ಹೊಂದಿದೆಯೇ ಅಥವಾ ಕಾಯ್ದೆಯಡಿ ಪೂರ್ವಾನುಮತಿ ನೀಡಲಾಗಿದೆಯೇ ಎಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗಿರುತ್ತದೆ ಎಂದು ಸಚಿವರು ತಿಳಿಸಿದರು.