ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರ್ಹೊಜೋಲಿ ಲೀಜೀಟ್ಸು
ಕೊಹಿಮಾ: ಅತಂತ್ರ ಸ್ಥಿತಿಗೆ ಸಿಲುಕಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರ್ಹೊಜೋಲಿ ಲೀಜೀಟ್ಸು ಹಾಗೂ ಅವರ ಬೆಂಬಲಿಗರು ವಿಧಾನಸಭೆಯಲ್ಲಿ ಬುಧವಾರ ನಿಗದಿಯಾಗಿದ್ದ ವಿಶ್ವಾಸ ಮತಯಾಚನೆಗೆ ಗೈರು ಹಾಜರಾದ ಹಿನ್ನಲೆಯಲ್ಲಿ ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಈಶಾನ್ಯ ರಾಜ್ಯದ ರಾಜಕೀಯ ಸ್ಥಿರತೆ ತ್ರಿಶಂಕು ಸ್ಥಿತಿಗೆ ತಲುಪಿದ್ದು, ವಿಶ್ವಾಸಮತಯಾಚನೆಗೆ ತಡೆ ನೀಡುವಂತೆ ಕೋರಿದ್ದ ಲೀಜಿಟ್ಸು ಮನವಿಯನ್ನು ಈ ಹಿಂದೆ ಗುವಾಹಟಿ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ರಾಜ್ಯಪಾಲ ಪಿ.ಬಿ ಆಚಾರ್ಯ ಅವರು, ನಿನ್ನೆ ವಿಧಾನಸಭಾಧ್ಯಕ್ಷ ಇಮ್ಟಿವಾಪಂಗ್ ಅವರಿಗೆ ಮುಖ್ಯಮಂತ್ರಿ ವಿಶ್ವಾಸ ಮತಯಾಚನೆಗಾಗಿ ವಿಶೇಷ ಅಧಿವೇಶನ ಕರೆಯುವಂತೆ ಸೂಚನೆ ನೀಡಿದ್ದರು.
ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್'ನ 43 ಶಾಸಕರು ಮಾಜಿ ಸಿಎಂ ಟಿ.ಆರ್. ಝೀಲಿಯಾಂಗ್ ನೇತೃತ್ವದಲ್ಲಿ ಸಿಎಂ ಲೀಜೀಟ್ಸು ವಿರುದ್ಧ ಬಂಡಾಯವೆದ್ದಿದ್ದಾರೆ. ಹೀಗಾಗಿ ಲೀಜಿಟ್ಸುಗೆ ವಿಶ್ವಾಸಮತ ಯಾಚಿಸಲು ಸೂಚಿಸಲಾಗಿತ್ತು.
ಮುಖ್ಯಮಂತ್ರಿಗಳ ವಿರುದ್ಧ ಬಂಡಾಯವೆದ್ದಿದ್ದ ಮಾಜಿ ಮುಖ್ಯಮಂತ್ರಿ ಟಿ.ಆರ್. ಝೀಲಿಯಾಂಗ್ ಮತ್ತವರ ಬೆಂಬಲಿಗರು ಇಂದು ಸದನದಲ್ಲಿ ಹಾಜರಾಗಿದ್ದತು. ಆದರೆ, ಮುಖ್ಯಮಂತ್ರಿ ಶುರ್ಹೊಜೋಲಿ ಲೀಜೀಟ್ಸು ಹಾಗೂ ಮತ್ತವರ ಬೆಂಬಲಿಗರು ವಿಶ್ವಾಸಮತ ಸಾಬೀತು ಮಾಡಲು ಸದನಕ್ಕೆ ಹಾಜರಾಗಲಿಲ್ಲ. ಹೀಗಾಗಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಸ್ಪೀಕರ್ ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಸದನದಲ್ಲಿ ನಡೆದ ಈ ಬೆಳವಣಿಗೆಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿಧಾನಸಭಾಧ್ಯಕ್ಷರು, ಈ ಬಗ್ಗೆ ರಾಜ್ಯಪಾಲರಿಗೆ ಶೀಘ್ರದಲ್ಲಿಯೇ ವರದಿ ಮಾಡಿತ್ತೇವೆ. ನಂತರವಷ್ಟೇ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.