ಕೊಹಿಮಾ: ವಿಶ್ವಾಸಮತಯಾಚಿಸುವಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರ್ಹೊಜೋಲಿ ಲೀಜೀಟ್ಸು ಅವರು ವಿಫಲರಾದ ಹಿನ್ನಲೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವಂತೆ ಟಿ.ಆರ್. ಝೀಲಿಯಾಂಗ್ ಅವರಿಗೆ ರಾಜ್ಯಪಾಲ ಪಿ.ಬಿ ಆಚಾರ್ಯ ಅವರು ಬುಧವಾರ ಸೂಚನೆ ನೀಡಿದ್ದಾರೆ.
ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್'ನ 43 ಶಾಸಕರು ಮಾಜಿ ಸಿಎಂ ಟಿ.ಆರ್. ಝೀಲಿಯಾಂಗ್ ನೇತೃತ್ವದಲ್ಲಿ ಸಿಎಂ ಲೀಜೀಟ್ಸು ವಿರುದ್ಧ ಬಂಡಾಯವೆದ್ದ ಹಿನ್ನಲೆಯಲ್ಲಿ ಲೀಜಿಟ್ಸುಗೆ ವಿಶ್ವಾಸಮತ ಯಾಚಿಸಲು ಸೂಚಿಸಲಾಗಿತ್ತು.
ವಿಶ್ವಾಸ ಮತಯಾಚನೆಗಾಗಿ ಇಂದು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆದರೆ, ವಿಶ್ವಾಸಮತಯಾಚಿಸಲು ಶುರ್ಹೊಜೋಲಿ ಲೀಜೀಟ್ಸು ಹಾಗೂ ಅವರ ಬೆಂಬಲಿಗರು ಗೈರು ಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ರಾಜ್ಯಪಾಲ ಪಿ.ಬಿ ಆಚಾರ್ಯ ಅವರು ಪ್ರಮಾಣವಚನ ಸ್ವೀಕರಿಸುವಂತೆ ಝೀಲಿಯಾಂಗ್'ಗೆ ಆಹ್ವಾನ ನೀಡಿದ್ದಾರೆಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವಂತೆ ಝೀಲಿಯಾಂಗ್'ಗೆ ಸೂಚಿಸಿರುವ ಆಚಾರ್ಯ ಅವರು, ಜುಲೈ.22ರೊಳಗಾಗಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.