ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಭಾರತ ದೇಶದ ಪ್ರಗತಿ ಮತ್ತು ಸಮೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗಳು ಪ್ರಮುಖವಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಅವರು ಇಂದು ದೆಹಲಿಯಲ್ಲಿ ಉನ್ನತ ಮಟ್ಟದ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ದೇಶದ ಸಮಸ್ಯೆಗಳನ್ನು ಬಗೆಹರಿಸಲು ವಿಜ್ಞಾನವನ್ನು ಅಳವಡಿಸಿಕೊಳ್ಳುವುದು ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಗಳ ಹುಡುಕುವಿಕೆಯ ಬಗ್ಗೆ ಉದಾಹರಣೆ ನೀಡಿದ ಸಂದರ್ಭದಲ್ಲಿ ಅವರು, ಶಾಲಾ ವಿದ್ಯಾರ್ಥಿಗಳಲ್ಲಿ ಪ್ರತಿಭಾನ್ವಿತ ಮತ್ತು ವಿಜ್ಞಾನದಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸಲು ಯಾಂತ್ರಿಕ ವ್ಯವಸ್ಥೆಯನ್ನು ತರಬೇಕು ಎಂದು ಹೇಳಿದರು.
ತಳಮಟ್ಟದಲ್ಲಿ ತುಂಬಾ ಸಂಶೋಧನೆಗಳು ನಡೆಯುತ್ತಿರುತ್ತದೆ.ಯಶಸ್ವಿ ಆವಿಷ್ಕಾರಗಳನ್ನು ದಾಖಲಿಸಿ ತಳಮಟ್ಟದಲ್ಲಿ ಪುನರಾವರ್ತಿಸಲು ಯಾಂತ್ರಿಕ ವ್ಯವಸ್ಥೆಯನ್ನು ರಚಿಸಬೇಕು ಎಂದು ಪ್ರಧಾನಿ ಹೇಳಿದರು. ಈ ವಿಷಯದಲ್ಲಿ ರಕ್ಷಣಾ ಸಿಬ್ಬಂದಿ ಸಂಶೋಧನೆಗಳನ್ನು ನಡೆಸುತ್ತಾರೆ ಎಂದರು.
ಕೃಷಿ ವಲಯದಲ್ಲಿ, ಉತ್ತಮ ಪ್ರೊಟೀನ್ ಇರುವ ಧಾನ್ಯಗಳು, ಬಲವರ್ಧಿತ ಆಹಾರಗಳು, ಹರಳೆಣ್ಣೆಯಲ್ಲಿ ಮೌಲ್ಯ ಸೇರ್ಪಡೆ ಇತ್ಯಾದಿ ಹೊಸ ವಿಷಯಗಳನ್ನು ಮಾಹಿತಿ, ತಂತ್ರಜ್ಞಾನಗಳ ಮೂಲಕ ಹೆಚ್ಚಿಸಬೇಕು. ಇಂಧನ ವಲಯದಲ್ಲಿ ಸೌರ ವಿದ್ಯುತ್ ನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ವಿದ್ಯುತ್ ಇಂಧನದ ಆಮದಿನ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದರು.
ದೇಶದ ಸಾಮಾನ್ಯ ಜನಜೀವನ ಮಟ್ಟವನ್ನು ಸುಧಾರಿಸಲು ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯ ವಿಜ್ಞಾನಿಗಳು ಸಮರ್ಥರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ 2022ರ ಹೊತ್ತಿಗೆ, ಗುರಿಯನ್ನು ತಲುಪಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಸಭೆಯಲ್ಲಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಸಾರಸ್ವತ್, ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ.ಆರ್.ಚಿದಂಬರಂ ಮತ್ತು ವಿಜ್ಞಾನ ಇಲಾಖೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos