ದೇಶ

4 ತಿಂಗಳ ಪಾಕ್ ಮಗುವಿಗೆ ಭಾರತದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ; ಸುಷ್ಮಾ ಸ್ವರಾಜ್ ಗೆ ಪೋಷಕರ ಧನ್ಯವಾದ!

Srinivasamurthy VN

ನವದೆಹಲಿ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಕಿಸ್ತಾನ ಮೂಲದ ಮಗುವಿಗೆ ಭಾರತದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಮಗುವಿನ ಚಿಕಿತ್ಸೆ ನೆರವಾದ ಭಾರತ ಮತ್ತು ವಿದೇಶಾಂಗ ಸಚಿವೆ ಸುಷ್ಮಾ  ಸ್ವರಾಜ್ ಅವರಿಗೆ ಪಾಕಿಸ್ತಾನ ಮೂಲದ ದಂಪತಿಗಳ ಧನ್ಯವಾದ ಹೇಳಿದ್ದಾರೆ.

ನೊಯ್ಡಾದ ಜೆಪಿ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಹಸುಗೂಸು ರೊಹಾನ್ ಗೆ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದೀಗ ಮಗುವಿನ ಹೃದಯ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಸುದ್ದಿಸಂಸ್ಥೆಯೊಂದಿಗೆ  ಮಾತನಾಡಿರುವ ಮಗುವಿನ ತಂದೆ ಕನ್ವಲ್ ಸಿದ್ದಿಕಿ ಹರ್ಷ ವ್ಯಕ್ತಪಡಿಸಿದ್ದು, ತಮ್ಮ ಮಗನ ಚಿಕಿತ್ಸೆಗೆ ನೆರವು ನೀಡಿದ ಭಾರತ ಮತ್ತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ನನ್ನ ಮಗನ ಚಿಕಿತ್ಸೆಗೆ ನೆರವಾದ ಭಾರತ ಸರ್ಕಾರಕ್ಕೆ ನಾನು ಮತ್ತು ನನ್ನ ಮಡದಿ ಧನ್ಯವಾದ ಹೇಳುತ್ತೇವೆ. ಭಾರತ ದೇಶ ನಮ್ಮ ತವರಾಗಿದ್ದು, ಭಾರತದಲ್ಲಿನ ನನ್ನ ಸಿಹಿ ಅನುಭವಗಳನ್ನು ಇಡೀ ವಿಶ್ವದೊಂದಿಗೆ ಹಂಚಿಕೊಳ್ಳಲು  ಇಚ್ಛಿಸುತ್ತೇನೆ. ಅಂತೆಯೇ ನನ್ನ ಮಗನ ಚಿಕಿತ್ಸೆಗಾಗಿ ನಾವು ಮನವಿ ಮಾಡಿಕೊಂಡಾಗ ಸುಷ್ಮಾ ಸ್ವರಾಜ್ ಅವರು ಪ್ರತಿಕ್ರಿಯಿಸಿದ ಪರಿ ನಿಜಕ್ಕೂ ಅದ್ಬುತ. ಅವರಿಗೆ ನಾನು ಚಿರಋಣಿಯಾಗಿರುತ್ತೇನೆ. ನನ್ನಂತೆಯೇ ಪಾಕಿಸ್ತಾನದಲ್ಲಿ  ಸಾವಿರಾರು ಮಂದಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ನನಗೆ ಸಿಕ್ಕ ಪ್ರತಿಕ್ರಿಯೆ ಅವರಿಗೂ ಸಿಗುತ್ತದೆ ಎಂದು ಭಾವಿಸುತ್ತೇನೆ ಎಂದು ಸಿದ್ದಿಕಿ ಹೇಳಿದ್ದಾರೆ.

ಪ್ರಸ್ತುತ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ನಮಗೆ ತುಂಬಾ ಭಯ ಕಾಡುತ್ತಿತ್ತು. ಆದರೆ ವೈದ್ಯರು ಧೈರ್ಯ ತುಂಬಿದ್ದಾರೆ. ಪ್ರಸ್ತುತ ಮಗ ಅಪಾಯದಿಂದ ಪಾರಾಗಿದ್ದು, ಒಂದು ತಿಂಗಳ ಬಳಿಕ ಡಿಸ್ಚಾರ್ಜ್  ಮಾಡಲಿದ್ದಾರೆ. ಬಳಿಕ ಒಂದಷ್ಟು ಔಷದೋಪಚಾರದ ಬಳಿಕ ಮಗ ಸಾಮಾನ್ಯ ಮಗುವಿನಂತಾಗುತ್ತಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸಿದ್ದಿಕಿ ಹೇಳಿದ್ದಾರೆ.

ಈ ಹಿಂದೆ ಮಗುವಿನ ಶಸ್ತ್ರಚಿಕಿತ್ಸೆ ನೆರವಾಗಿ ಎಂದು ಸಿದ್ದಿಕಿ ಮಾಡಿದ್ದ ಮನವಿಗೆ ತುರ್ತಾಗಿ ಸ್ಪಂದಿಸಿದ್ದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು, ಕೂಡಲೇ ಭಾರತೀಯ ವಿದೇಶಾಂಗ ಕಚೇರಿಯನ್ನು ಸಂಪರ್ಕಿಸುವಂತೆ ಹೇಳಿದ್ದರು.  ಅದರೆ ಕಳೆದ ಜೂನ್ 13ರಂದು ಬಾಲಕನನ್ನು ಮತ್ತು ಆತನ ಪೋಷಕರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಬರ ಮಾಡಿಕೊಳ್ಳಲಾಗಿತ್ತು.

SCROLL FOR NEXT