ಲಕ್ನೋ: ಆ ಗ್ರಾಮದಲ್ಲಿ ಮದುವೆ ಸಮಾರಂಭ ನಡೆದು 40 ದಶಕಗಳೇ ಕಳೆದುಹೋಗಿವೆ. ಅದೊಂದು ಸಣ್ಣ ಹಳ್ಳಿ. ಉತ್ತರ ಪ್ರದೇಶದ ಕಾನ್ಪುರದ ಯಮುನಾ ನದಿ ತೀರದಲ್ಲಿರುವ ಮುರಳೀಪುರ ಹಳ್ಳಿಯ ಯುವಕರು ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಬಡತನ, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು. ಪಕ್ಕದ ಹಳ್ಳಿಯ ನಿವಾಸಿಗಳು ತಮ್ಮ ಹೆಣ್ಣು ಮಕ್ಕಳನ್ನು ಈ ಹಳ್ಳಿಯ ಯುವಕರಿಗೆ ಮದುವೆ ಮಾಡಿಕೊಡಲು ಒಪ್ಪುವುದಿಲ್ಲ. ಈ ಹಳ್ಳಿಗೆ ಈಗ ಬ್ರಹ್ಮಚಾರಿಗಳ ಹಳ್ಳಿ ಎಂಬ ಹೆಸರು ಬಂದಿದೆ.
ಮುರಳೀಪುರ ಗ್ರಾಮದಲ್ಲಿ 100ರಿಂದ 120 ಜನರಿದ್ದಾರೆ. ಅವರಲ್ಲಿ ಕನಿಷ್ಠ 50 ಮಂದಿ 18ರಿಂದ 75 ವರ್ಷ ವಯಸ್ಸಿನವರು. ಇವರಲ್ಲಿ ಯಾರೊಬ್ಬರಿಗೂ ಮದುವೆಯಾಗಿಲ್ಲ. ನಾವು 40 ವರ್ಷಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಆಗ ಬಲ್ದವೂ ಎಂಬ ವ್ಯಕ್ತಿ ಮದುವೆಯಾಗಿದ್ದ ಎನ್ನುತ್ತಾರೆ 62 ವರ್ಷದ ರಾಮ್ ಸನೇಹಿ. ಆಗ ರಾಮ್ ಸನೇಹಿಯವರಿಗೆ 22 ವರ್ಷ ವಯಸ್ಸಾಗಿತ್ತಂತೆ.
ನೀವು ಮದುವೆಯಾಗಲು ಪ್ರಯತ್ನಪಡಲಿಲ್ಲವೇ ಎಂದು ಕೇಳಿದಾಗ ಸನೇಹಿ, ಬಡತನದಿಂದಾಗಿ ಮದುವೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ. ರಾಮ್ ಸನೇಹಿ ಹತ್ತಿರ ಒಂದು ತುಂಡು ಭೂಮಿಯಿದೆ.
ಮುರಳೀಪುರ ಗ್ರಾಮದಲ್ಲಿರುವ ಅತ್ಯಂತ ಹಿರಿಯ ವ್ಯಕ್ತಿ ಶಂಕರ್ ಯಾದವ್ ರಾಮ್ ಸನೇಹಿ ಮಾತಿಗೆ ದನಿಗೂಡಿಸುತ್ತಾರೆ. ಇಲ್ಲಿ ಬಹುತೇಕ ಪುರುಷರು ಬ್ರಹ್ಮಚಾರಿಗಳಾಗಿದ್ದಾರೆ. ಬೇರೆ ಪಟ್ಟಣ, ಜಿಲ್ಲೆಗಳಿಗೆ ಹೋದ ಪುರುಷರಿಗೆ ಮದುವೆಯಾಗಿದೆ ಎನ್ನುತ್ತಾರೆ.
ಈ ಗ್ರಾಮದ ಪುರುಷರಿಗೆ ಮದುವೆಯಾಗದಿರಲು ಮತ್ತೊಂದು ಕಾರಣ ಡಕಾಯಿತರ ಭಯ. ಯಮುನಾ ನದಿ ದಂಡೆಯಲ್ಲಿರುವ ಈ ಗ್ರಾಮ ಒಂದು ಕಾಲದಲ್ಲಿ ಡಕಾಯಿತರ ಸ್ವರ್ಗವೆನಿಸಿಕೊಂಡಿತ್ತು. ಹೀಗಿರುವಾಗ ಯಾರೂ ತಮ್ಮ ಹೆಣ್ಣು ಮಕ್ಕಳನ್ನು ಈ ಊರಿನ ಪುರುಷರಿಗೆ ಮದುವೆ ಮಾಡಿಕೊಡಲು ಒಪ್ಪುತ್ತಿರಲಿಲ್ಲ ಎನ್ನುತ್ತಾರೆ 70 ವರ್ಷದ ವಯೋವೃದ್ಧೆ ಜಮುನಾ. ಅವರಿಗೆ ಮೂವರು ಗಂಡು ಮಕ್ಕಳಿದ್ದು ಯಾರಿಗೂ ಮದುವೆಯಾಗಿಲ್ಲ.
ಗ್ರಾಮವು ಸರ್ಕಾರಿ ದಾಖಲೆಗಳಲ್ಲಿ ಅಸ್ಥಿತ್ವದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲಿ ಪ್ರಾಥಮಿಕ ಶಾಲೆಯೊಂದಿದ್ದು, ಅದು ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹತ್ತಿರದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಮುರಳಿಪುರದಿಂದ 20-25 ಕಿಲೋ ಮೀಟರ್ ದೂರದಲ್ಲಿದೆ. ಹತ್ತಿರದ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಕೂಡ ಇರುವುದು 20 ಕಿಲೋ ಮೀಟರ್ ದೂರದಲ್ಲಿ.
ಇಲ್ಲಿ ಮೊಬೈಲ್ ಫೋನ್ ಗೆ ಸಂಪರ್ಕ ಸಿಗುತ್ತದೆಯಾದರೂ ಕೂಡ ಗ್ರಾಮಸ್ಥರು ಬಳಸುವುದು ಕಡಿಮೆ.ಯಾಕೆಂದರೆ ಅದನ್ನು ರಿಚಾರ್ಜ್ ಮಾಡಿಸಿಕೊಳ್ಳಲು ಹತ್ತಿರದ ಪಟ್ಟಣಕ್ಕೆ ಹೋಗಬೇಕು.
ನನ್ನ ಪುತ್ರ ಅವದೇಶ್ ಹತ್ತಿರದ ಪಟ್ಟಣದ ಖಾಸಗಿ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೆಲ ವರ್ಷಗಳ ಹಿಂದೆ ಆತನ ಮದುವೆ ಪಕ್ಕದ ಗ್ರಾಮದ ಹುಡುಗಿ ಜೊತೆ ನಿಶ್ಚಯವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಇಲ್ಲಿ ವಿದ್ಯುತ್, ಟಿ.ವಿ ಇಲ್ಲ ಎಂದು ಹುಡುಗಿ ಮದುವೆಯಾಗಲು ತಿರಸ್ಕರಿಸಿದಳು ಎನ್ನುತ್ತಾರೆ ರಾಜ ಯಾದವ್.
ಮತ್ತೊಬ್ಬ ಬ್ರಹ್ಮಚಾರಿ 65 ವರ್ಷದ ಸದರಿ ಯಾದವ್, ತಾವು ಇನ್ನೂ ಮದುವೆಯಾಗಲು ಕಾಯುತ್ತಿದ್ದೇನೆ. ನನ್ನ ಜೊತೆ ಯಾರೂ ಇಲ್ಲ. ಮದುವೆಯಾಗದೆ ಒಂಟಿಯಾಗಿ ಹೀಗೆ ಬದುಕುವುದು ನರಕವಾಗಿದೆ ಎನ್ನುತ್ತಾರೆ.
ಮುರಳೀಪುರ ಹಳ್ಳಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಕೇದಾರ್ ನಾಥ್ ಸಿಂಗ್ ಒಪ್ಪಿಕೊಳ್ಳುತ್ತಾರೆ. ಹಳ್ಳಿಗರ ಉದ್ಧಾರಕ್ಕೆ ತಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡುತ್ತಾರೆ.