ನವದೆಹಲಿ: ಸಾಲದ ದೊರೆ ವಿಜಯ್ ಮಲ್ಯ ಅವರಿಗೆ ವಿಶೇಷ ಆತಿಥ್ಯವನ್ನು ನೀಡುವುದಿಲ್ಲ, ಜೈಲಿನಲ್ಲಿರುವ ಎಲ್ಲಾ ಕೈದಿಗಳಂತೆಯೇ ಅವರನ್ನೂ ನೋಡಲಾಗುತ್ತದೆ ಎಂದು ಬ್ರಿಟನ್'ಗೆ ಭಾರತ ಹೇಳಿದೆ.
ಭಾರತೀಯ ಬ್ಯಾಂಕ್ ಗಳಿಗೆ ರೂ.9000 ಕೋಟಿ ಪಂಗನಾಮ ಹಾಕಿ ಇಂಗ್ಲೆಂಡಿನಲ್ಲಿರುವ ಸಾಲದ ದೊರೆ ವಿಜಯ್ ಮಲ್ಯ ಪ್ರಕರಣ ಕುರಿತಂತೆ ಕಳೆದ ವಾರವಷ್ಟೇ ಲಂಡನ್ ನಲ್ಲಿ ಉನ್ನತಾಧಿಕಾರಿಗಳು ಸಭೆಯೊಂದನ್ನು ನಡೆಸಿದ್ದಾರೆ.
ಸಭೆಯಲ್ಲಿ ಭಾರತ ನಿಯೋಗದ ನೇತೃತ್ವ ವಹಿಸಿಿದ್ದ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರಿಷಿ ಅವರು, ನಮ್ಮ ಕೇಂದ್ರ ಕಾರಾಗೃಹಗಳು ನಿಮ್ಮ ದೇಶದ ಜೈಲುಗಳಂತೆ ಗುಣಮಟ್ಟದಿಂದ ಕೂಡಿವೆ. ಕೈದಿಗಳಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬ್ರಿಟನ್ ಜೈಲಿಗಿಂದ ಭಾರತದ ಜೈಲುಗಳು ಕಡಿಮೆಯೇನಿಲ್ಲ. ಬ್ರಿಟನ್ ನಿಂದ ವಶಕ್ಕೆ ಪಡೆಯುವ ಯಾವುದೇ ವ್ಯಕ್ತಿಯಾದರೂ ಇತರೆ ಕೈದಿಗಳಿಗೆ ನೀಡುವ ಸೌಲಭ್ಯಗಳನ್ನೇ ನೀಡಲಾಗುತ್ತದೆ. ವಿದೇಶದಿಂದ ವಶಕ್ಕೆ ಪಡೆಯಲಾಗಿದೆ ಎಂಬ ಯಾವುದೇ ಕಾರಣಗಳಿಂದಲೂ ಕೈದಿಗೂ ವಿಶೇಷ ಆತಿಥ್ಯವನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅತ್ಯಂತ ಕೆಟ್ಟದಾಗಿರುವ ಭಾರತದ ಜೈಲುಗಳಲ್ಲಿ ಇರಲು ನನ್ನಿಂದ ಸಾಧ್ಯವಿಲ್ಲ ಎಂದು ಈ ಹಿಂದೆ ಮಲ್ಯ ಲಂಡನ್ ಕೋರ್ಟ್ ಮನವಿ ಮಾಡಿದ್ದರು.
ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರನ್ನು ಯಾವ ಜೈಲಿನಲ್ಲಿರಿಸಲಾಗುವುದು ಎಂದು ಈ ಹಿಂದೆ ಬ್ರಿಟನ್ ಸರ್ಕಾರ ಕೇಳಿತ್ತು. ಅಲ್ಲಿ ಕನಿಷ್ಟ ಮೂರು ಚದರ ಮೀಟರ್ ಸ್ಥಳಾವಕಾಶ, ಸ್ವಚ್ಛವಾದ ಹಾಸಿಗೆ, ಶುದ್ಧವಾದ ನೀರಿನ ವ್ಯವಸ್ಥೆ ಇರಬೇಕೆಂದೂ ಬ್ರಿಟನ್ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಿದ್ದಲ್ಲಿ ಅವರನ್ನು ಮುಂಬೈನ ಆರ್ಥರ್ ರಸ್ತೆಯ ಕಾರಾಗೃಹದಲ್ಲಿರಿಸಲಾಗುವುದು ಎಂದು ಹೇಳಿತ್ತು.
ನಂತರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದ್ದ ಕೇಂದ್ರ ಗೃಹ ಇಲಾಖೆ ಆರ್ಥರ್ ರಸ್ತೆಯಲ್ಲಿರುವ ಜೈಲಿನ ಸ್ಥಿತಿಗತಿಗಳನ್ನು ಸುಧಾರಿಸಬೇಕೆಂದು ಸೂಚಿಸಿತ್ತು.