ದೇಶ

ದೆಹಲಿ: ಓಲಾ ಚಾಲಕನಿಂದ ಅಪಹರಣಕ್ಕೊಳಗಾಗಿದ್ದ ತೆಲಂಗಾಣ ವೈದ್ಯನ ರಕ್ಷಣೆ

Manjula VN
ಹೈದರಾಬಾದ್: ಓಲಾ ಕ್ಯಾಬ್ ಚಾಲಕನಿಂದ ಅಪಹರಣಕ್ಕೊಳಗಾಗಿದ್ದ ತೆಲಂಗಾಣ ಮೂಲಕ ವೈದ್ಯ ಶ್ರೀಕಾಂತ್ ಗೌಡ್ ರನ್ನು ದೆಹಲಿ ಪೊಲೀಸರು ಬುಧವಾರ ರಕ್ಷಣೆ ಮಾಡಿದ್ದಾರೆ. 
ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಕಾಂತ್ ಅವರು ಜು.6 ರಂದು ಅಪಹರಣಕ್ಕೊಳಗಾಗಿದ್ದರು. ಜು.6ರಂದು ಮೆಟ್ರೋ ನಿಲ್ದಾಣಕ್ಕೆ ಹೋಗುವ ಸಲುವಾಗಿ ಶ್ರೀಕಾಂತ್ ಅವರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ನೋಯ್ಡಾದ ದಾದ್ರಿ ಬಳಿ ಕಾರನ್ನು ನಿಲ್ಲಿಸಿದ್ದ ಚಾಲಕ ಗುಂಪೊಂದರ ಜೊತೆಗೆ ಸೇರಿಕೊಂಡು ಶ್ರೀಕಾಂತ್ ಅವರನ್ನು ಅಪಹರಿಸಿದ್ದ. 
ನಂತರ ಶ್ರೀಕಾಂತ್ ಅವರ ಕುಟುಂಬ ಸದಸ್ಯರಿಗೆ ಹಾಗೂ ಆಸ್ಪತ್ರೆಗೆ ಕರೆ ಮಾಡುತ್ತಿದ್ದ ಆರೋಪಿ ರೂ.5 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಪ್ರಕರಣ ಸಂಬಂಧ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ತನಿಖೆ ಆರೇಭಿಸಿದ್ದರು. 
ಇದರಂತೆ ಮುಜಾಫರ್ನಗರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವೈದ್ಯ ಶ್ರೀಕಾಂತ್ ನನ್ನು ರಕ್ಷಣೆ ಮಾಡಿದ್ದಾರೆ. 
ಅಪಹರಣಕ್ಕೊಳಗಾಗಿದ್ದ ಶ್ರೀಕಾಂತ್ ಅವರು ಚೀನಾದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು, ರಾಜಧಾನಿ ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. 
ಶ್ರೀಕಾಂತ್ ಗೌಡ್'ರನ್ನು ರಕ್ಷಣೆ ಮಾಡಿರುವುದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಶ್ರೀಕಾಂತ್ ಸಂಬಂಧಿ ಶ್ರೀನಿವಾಸ್ ಗೌಡ್ ಮಾತನಾಡಿ, ಸಹೋದರನನ್ನು ಉತ್ತರಪ್ರದೇಶ ಹಾಗೂ ದೆಹಲಿ ಪೊಲೀಸರು ರಕ್ಷಣೆ ಮಾಡಿದ್ದಾರೆಂದು ಹೇಳಿದ್ದಾರೆ. 
SCROLL FOR NEXT