ನವದೆಹಲಿ: ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವೆ ಬಿಕ್ಕಟ್ಟು ಎದುರಾಗಿದ್ದು, ಇದರ ನಡುವೆಯೇ ವಿವಾದದಲ್ಲಿ ಮೂಗು ತೂರಿಸಲು ಪಾಕಿಸ್ತಾನ ಎಲ್ಲಾ ರೀತಿಯ ಯತ್ನಗಳನ್ನು ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿವೆ.
ಇದಕ್ಕೆ ಉದಾಹರಣೆಯೆಂಬಂತೆ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ಅವರು ಚೀನಾದ ಭಾರತ ರಾಯಭಾರಿ ಲುವೊ ಝಾಹೋಯಿಯಿ ಅವರನ್ನು ಭೇಟಿ ಮಾಡಿದ್ದು, ಡೋಕ್ಲಾಮ್ ವಿವಾದ ಸಂಬಂಧ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಕಳೆದ ಬುಧವಾರ ಚೀನಾ ರಾಯಭಾರಿಯೊಂದಿಗೆ ಅಬ್ದುಲ್ ಬಸಿತ್ ಅವರು ಮಾತುಕತೆ ನಡೆಸಿದ್ದು, ಶೀಘ್ರದಲ್ಲಿಯೇ ಭೂತಾನ್ ರಾಯಭಾರಿಯನ್ನು ಭೇಟಿ ಮಾಡಲಿದ್ದಾರೆಂದು ವರದಿಗಳು ತಿಳಿಸಿವೆ.
ಸಿಕ್ಕಿಂ ಗಡಿಯಲ್ಲಿ, ಭೂತಾನ್-ಭಾರತ ಮತ್ತು ಚೀನಾ ಟ್ರೈಜಂಕ್ಷನ್ ಪ್ರದೇಶದಲ್ಲಿರುವ ಡೋಕ್ಲಾಮ್ ನಲ್ಲಿ ಚೀನಾ ಕೈಗೊಂಡ ವಿವಾದಾತ್ಮಕ ರಸ್ತೆ ನಿರ್ಮಾಣ ಕಾರ್ಯವನ್ನು ಕಳೆದ ಮಾರ್ಚ್ 16 ರಂದು ಭಾರತೀಯ ಸೇನೆ ನಿಲ್ಲಿಸಿತ್ತು. ಪರಿಣಾಮವಾಗಿ ಉಭಯ ದೇಶಗಳ ನಡುವೆ ಸೇನಾ ಮುಖಾಮುಖೀ ಉಂಟಾಗಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.