ಕೊಲ್ಲಂ: ಅತ್ಯಾಚಾರ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ ಎಂ ವಿನ್ಸೆಂಟ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೋವಲಮ್ ಶಾಸಕ ಎಂ ವಿನ್ಸೆಂಟ್ ವಿರುದ್ಧ 51 ವರ್ಷದ ಮಹಿಳೆ ದೂರು ನೀಡಿದ್ದರು. ಅತ್ಯಾಚಾರ ಬಳಿಕ ವಿನ್ಸೆಂಟ್ ಸಂತ್ರಸ್ತೆಗೆ ದೂರವಾಣಿ ಕರೆ ಮಾಡಿ ದೂರು ನೀಡದಂತೆ ಬೆದರಿಕೆ ಹಾಕಿದ್ದರಂತೆ. ಇದರಿಂದ ಮನನೊಂದ ಮಹಿಳೆ ಕಳೆದ ವಾರ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ಅತ್ಯಾಚಾರ ಸಂತ್ರಸ್ತ ಮಹಿಳೆ ಪತಿ ಕೊಲ್ಲಂ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅತ್ಯಾಚಾರ ಆರೋಪ ಹಿನ್ನೆಲೆ ಎಂ ವಿನ್ಸೆಂಟ್ ಅವರು ತನ್ನನ್ನು ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಡಿಜಿಪಿಗೆ ದೂರು ನೀಡಿದ್ದರು. ಅಲ್ಲದೆ ತಿರುವನಂತಪುರ ಜಿಲ್ಲಾ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ಇನ್ನು ವಿನ್ಸೆಂಟ್ ವಿರುದ್ಧ ವಿಚಾರಣೆ ನಡೆಸಲು ಸ್ಪೀಕರ್ ಅನುಮತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ವಿನ್ಸೆಂಟ್ ಅವರನ್ನು ಸುದೀರ್ಘ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ವಶಕ್ಕೆ ಪಡೆದಿದ್ದಾರೆ.