ದೇಶ

ಬೆದರಿಕೆಗಳನ್ನು ಬಿಟ್ಟು ಮಾತುಕತೆ ಮುಂದಾಗಿ: ಚೀನಾ, ಭಾರತಕ್ಕೆ ಅಮೆರಿಕ ಸಲಹೆ

Manjula VN
ವಾಷಿಂಗ್ಟನ್: ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವೆ ವಾಕ್ಸಮರ ಮುಂದುವರೆದಿರುವ ಹಿನ್ನಲೆಯಲ್ಲಿ ಬೆದರಿಕೆಗಳನ್ನು ಬದಿಗಿಟ್ಟು ವಿವಾದ ಸಂಬಂಧ ಉಭಯ ರಾಷ್ಟ್ರಗಳು ನೇರಾನೇರ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಶಮನ ಮಾಡಬೇಕೆಂದು ಅಮೆರಿಕ ಸಲಹೆ ಮಾಡಿದೆ. 
ಕಳೆದ ಒಂದೂವರೆ ತಿಂಗಳಿನಿಂದಲೂ ಎರಡೂ ರಾಷ್ಟ್ರಗಳ ನಡುವೆ ಉದ್ಭವಿಸಿರುವ ತ್ವೇಷಮಯ ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಗ್ಯಾರಿ ರಾಸ್ ಅವರು, ಯಾವುದೇ ದೇಶದ ಪರವಾಗಿ ಮಾತನಾಡರು ನಿರಾಕರಿಸಿದ್ದಾರೆ. ಭಾರತ ಮತ್ತು ಚೀನಾ ರಾಷ್ಟ್ರಗಳು ಬೆದರಿಕೆ ಅಂಶಗಳನ್ನು ಬದಿಗೆ ಸರಿಸಿ ನೇರಾನೇರ ಮಾತುಕತೆಗೆ ಕೂರುವ ಮೂಲಕ ಡೋಕ್ಲಾಮ್ ಗಡಿ ಪ್ರದೇಶದ ಕುರಿತು ಉಂಟಾಗಿರುವ ಸೇನಾ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ. 
ಇದೇ ವೇಳೆ ಡೋಕ್ಲಾಮ್ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಆ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ಭಾರತ ಹಾಗೂ ಚೀನಾ ರಾಷ್ಟ್ರವನ್ನೇ ಕೇಳಬೇಕು. ಈ ವಿಚಾರದಲ್ಲಿ ನಾವು ಊಹಾಪೋಹ ಸೃಷ್ಟಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ಈ ನಡುವೆ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜುಲೈ 27-28 ರಂದು ಚೀನಾ ರಾಷ್ಟ್ರಕ್ಕೆ ತೆರಳಿದ್ದು, ಭೇಟಿ ವೇಳೆ ಚೀನಾ ರಾಷ್ಟ್ರದ ಅಧಿಕಾರಿಗಳೊಂದಿಗೆ ಡೋಕ್ಲಾಮ್ ವಿವಾದ ಸಂಬಂಧ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. 
SCROLL FOR NEXT