ನವದೆಹಲಿ: 1989-90 ರ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ 700 ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದ 215 ಪ್ರಕರಣಗಳ ಮರುತನಿಖೆಗೆ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪಂಡಿತರ ಹತ್ಯೆಗೆ ಸಂಬಂಧಿಸಿದ 215 ಪ್ರಕರಣಗಳನ್ನು ಮರುತನಿಖೆಗೆ ಆದೇಶಿಸಬೇಕು ಹಾಗೂ ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲೀಕ್ ಸೇರಿದಂತೆ ಹಲವರನ್ನು ಮರು ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿ ರೂಟ್ಸ್ ಆಫ್ ಕಾಶ್ಮೀರ್ ಸಂಘಟನೆಯ ಪರ ವಕೀಲ ವಿಕಾಸ್ ಪಡೋರಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಜೆಎಸ್ ಖೇಹರ್ ಹಾಗೂ ನ್ಯಾ.ಡಿವೈ ಚಂದ್ರಚೂಡ್ 27 ವರ್ಷಗಳ ಕಾಲ ಸುಮ್ಮನಿದ್ದು, ಈಗ ಮರು ತನಿಖೆಗೆ ಆಗ್ರಹಿಸುತ್ತಿದ್ದೀರಿ, ಈಗ ಸಾಕ್ಷ್ಯಗಳನ್ನು ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದ್ದಾರೆ.
27 ವರ್ಷಗಳ ನಂತರ ಸಾಕ್ಷ್ಯ ಸಿಗುವುದು ಕಷ್ಟ ಆದ್ದರಿಂದ ಮರುತನಿಖೆಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮರುತನಿಖೆಗೆ ಆಗ್ರಹಿಸಿದ್ದ ವಕೀಲಕರು ಜಮ್ಮು-ಕಾಶ್ಮೀರ ಸರ್ಕಾರವನ್ನು ದೂಷಿಸಿದ್ದು, ಪಂಡಿತರ ಮೇಲಿನ ದೌರ್ಜನ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು ಹಾಗೂ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ವಾಸಿದ್ದರು.