ಡೊಕ್ಲಾಮ್ ಪ್ರಕ್ಷುಬ್ಧ; ಭವಿಷ್ಯದಲ್ಲಿ ಭಾರತಕ್ಕೆ ಚೀನಾ ಅಪಾಯಕಾರಿ: ಸೇನಾ ಉಪ ಮುಖ್ಯಸ್ಥರ ಎಚ್ಚರಿಕೆ
ಸಿಕ್ಕಿಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಡೊಕ್ಲಾಮ್ ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತದ ಸೇನಾ ಉಪ ಮುಖ್ಯಸ್ಥ....
ನವದೆಹಲಿ: ಸಿಕ್ಕಿಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಡೊಕ್ಲಾಮ್ ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತದ ಸೇನಾ ಉಪ ಮುಖ್ಯಸ್ಥ ಶರತ್ ಚಂದ್ ಅವರು ಮುಂದಿನ ದಿನಗಳಲ್ಲಿ ಚೀನಾ ಭಾರತಕ್ಕೆ ದೊಡ್ಡ ಅಪಾಯಕಾರಿಯಾಗಲಿದೆ ಎಂದು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಡೊಕ್ಲಾಮ್ ನಲ್ಲಿ ಭಾರತ-ಚೀನಾ ಎರಡು ದೇಶಗಳ ಸೇನೆ ಮುಖಾಮುಖಿಯಾಗಿ ಸೇನಾ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಚಂದ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇಂದು ಸೇನೆಯ ಮಾಸ್ಟರ್ ಜನರಲ್ ಆರ್ಡನೆನ್ಸ್ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಶರತ್ ಚಂದ್ ಅವರು, ಎಲ್‌ಓಸಿಯಲ್ಲಿನ ಭಾರತೀಯ ಶಾಲೆಯನ್ನು ಗುರಿ ಇರಿಸಿಕೊಂಡು ಪಾಕ್ ಸೇನೆ ಶೆಲ್ ದಾಳಿ ನಡೆಸುತ್ತಿರುವುದು ಅತ್ಯಂತ ಹೇಯ ಹಾಗೂ ಹೇಡಿತನದ ಕೃತ್ಯ ಎಂದರು.
ಇನ್ನು ಚೀನಾ ವಿಚಾರ ಪ್ರಸ್ತಾಪಿಸಿದ ಸೇನಾ ಉಪ ಮುಖ್ಯಸ್ಥ, ನಮ್ಮ ಉತ್ತರ ದಿಕ್ಕಿನಲ್ಲಿ ಚೀನಾ ಇದೆ. ಅದರ ಭೂಭಾಗ ಅತ್ಯಂತ ದೊಡ್ಡದಿದೆ. ಅದರ ಸಂಪನ್ಮೂಲಗಳು ಅತ್ಯಪಾರ ಇವೆ. ಚೀನಾ ಸೇನೆ ಕೂಡ ಬೃಹತ್ ಗಾತ್ರದಲ್ಲಿದೆ. ನಮ್ಮ ಮತ್ತು ಅವರ ನಡುವೆ ಹಿಮಾಲಯ ಪರ್ವತ ಇದ್ದರೂ ಚೀನಾ ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಬಲು ದೊಡ್ಡ ಬೆದರಿಕೆಯಾಗಲಿದೆ ಎಂದರು.
ಸೈನೀಕರಣದಲ್ಲಿ ಚೀನಾ ಈಗ ಅಮೆರಿಕದ ಜತೆಗೆ ಸ್ಪರ್ಧೆ ನಡೆಸುವಷ್ಟು ಮುಂದಕ್ಕೆ ಸಾಗಿದೆ. ಮಾತ್ರವಲ್ಲದೆ ಚೀನಾ ವಿಶ್ವದ ಎರಡನೇ ಬೃಹತ್ ಆರ್ಥಿಕ ಶಕ್ತಿಯಾಗಿದೆ. ಬೇಗನೆ ಅದು ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಹೇಳಿದ್ದಾರೆ.