ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳಿಗೆ ಹಾಗೂ ಕಲ್ಲೂ ತೂರಾಟಕ್ಕಾಗಿ ಪಾಕಿಸ್ತಾನದಿಂದ ಹಣಕಾಸಿನ ನೆರವು ಪಡೆದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಏಳು ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ದೆಹಲಿ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿ ಮಂಗಳವಾರ ಆದೇಶಿಸಿದೆ.
ಪ್ರತ್ಯೇಕವಾದಿ ನಾಯಕ ಎಸ್ ಎಎಸ್ ಗೀಲಾನಿ ಅಳಿಯ ಅಲ್ತಫ್ ಶಾ, ಆಯುಜ್ ಅಕ್ಬರ್, ಪೀರ್ ಸೈಫುಲ್ತಾ, ಮೆಹ್ರಾಜ್ ಕಲ್ವಾಲ್, ಶಾಹೀದ್ ಉಲ್ ಇಸ್ಲಾಮ್, ನಯೀಮ್ ಖಾನ್ ಮತ್ತು ಬಿಟ್ಟಾ ಕರಾಟೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪೂನಂ ಬಂಬ ಅವರು, ಎಲ್ಲಾ ಏಳು ಆರೋಪಿಗಳನ್ನು ಆಗಸ್ಟ್ 4ರ ವರೆಗೆ ಎನ್ಐಎ ವಶಕ್ಕೆ ನೀಡಿದ್ದಾರೆ.
ಕಳೆದ ತಿಂಗಳು ಗೀಲಾನಿ ಅಳಿಯಶಾ ಮನೆ ಮೇಲೆ ಎನ್ಐಎ ದಾಳಿ ನಡೆಸಿದ್ದು, ಈ ವೇಳೆ ಕೆಲವು ಬ್ಯಾಂಕ್ ಪುಸ್ತಕಗಳು, ಎರಡು ಕೋಟಿ ರುಪಾಯಿ ನಗದು ಮತ್ತು ನಿಷೇಧಿತ ಸಂಘಟನೆಗಳಾದ ಎಲ್ ಇಟಿ, ಹಿಜ್ಬುಲ್ ಮುಜಾಹಿದ್ದೀನ್ ಲೆಟರೆಡ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕಾಶ್ಮೀರದಲ್ಲಿ ಶಾಂತಿ ಕದಡಲು, ಭದ್ರತಾ ಸಿಬ್ಬಂದಿ ಮೇಲೆ ಕಲ್ಲೆಸತ, ಶಾಲೆಗಳಿಗೆ ಬೆಂಕಿ ಸೇರಿದಂತೆ ಇತರೆ ಕುಕೃತ್ಯಗಳನ್ನು ನಡೆಸಲು ಪಾಕಿಸ್ತಾನದಿಂದ ದೇಣಿಗೆ ಸಂಗ್ರಹಿಸುವಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.