ನವದೆಹಲಿ: ಯುದ್ಧ ಆರಂಭವಾದರೆ ಹತ್ತೇ ದಿನದಲ್ಲಿ ಭಾರತದ ಶಸ್ತ್ರಾಸ್ತ್ರ ಖಾಲಿ ಎಂಬ ಸಿಜಿಎ ವರದಿಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿ, ದೇಶದ ಸಾರ್ವಭೌಮತೆಯನ್ನು ಕಾಪಾಡಲು ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಸಿಎಜಿ ವರದಿಯ ಬಗ್ಗೆ ಮಾತನಾಡಿರುವ ಅರುಣ್ ಜೇಟ್ಲಿ, "152 ವಿಧಗಳ ಶಸ್ತ್ರಾಸ್ತ್ರಗಳ ಪೈಕಿ 61 ಶಸ್ತ್ರಾಸ್ತ್ರಗಳು ಮಾತ್ರ 10 ದಿನದ ಯುದ್ಧಕ್ಕೆ ಆಗುವಷ್ಟಿದೆ ಎಂದಿದೆ, ಒಂದು ತೀವ್ರವಾದ 40 ದಿನಗಳ ಯುದ್ಧಕ್ಕೆ ಸೇನೆ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಬೇಕಾಗುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಅರುಣ್ ಜೇಟ್ಲಿ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನ ನಾಯಕ ಆನಂದ್ ಶರ್ಮಾ, " ಪ್ರಕ್ರಿಯೆಯನ್ನು ಯಾವಾಗಿನಿಂದ ಸರಳಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮೂರು ವರ್ಷಗಳಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ. ಸೇನೆಗೆ ಶಸ್ತ್ರಾಸ್ತ್ರಗಳನ್ನು ಹೆಚ್ಚು ಪೂರೈಕೆ ಮಾಡುವ ನಿರ್ಧಾರವನ್ನು ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಭಾರತಕ್ಕೆ ಪೂರ್ಣಾವಧಿ ರಕ್ಷಣಾ ಮಂತ್ರಿ ಇಲ್ಲ, ಈ ಹಿಂದೆ ಇದ್ದ ಮನೋಹರ್ ಪರಿಕ್ಕರ್, ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.