ಪಾಟ್ನಾ: ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಉಪಮುಖ್ಯಮಂತ್ರಿ ಸ್ಥಾನಕ್ಕೆ ತೇಜಸ್ವಿಯಾದವ್ ರಾಜೀನಾಮೆ ನೀಡುವುದಿಲ್ಲ ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ತೇಜಸ್ವಿ ಯಾದವ್ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿತ್ತು. ಪರಿಣಾಮ ಬಿಹಾರದ ಮಹಾಮೈತ್ರಿ ಮುರಿಯಲಿದೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಅಷ್ಟೇ ಅಲ್ಲದೇ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟ ಸೇರಲು ಒಲವು ಹೊಂದಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಇದೀಗ ನಿತೀಶ್ ಕುಮಾರ್ ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.
ರಾಜೀನಾಮೆ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್, ಕಳೆದ 20 ತಿಂಗಳಿನಿಂದ ಬಿಹಾರದಲ್ಲಿ ಮಹಾಮೈತ್ರಿಯ ಸರ್ಕಾರವಿತ್ತು, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಧ್ಯವಾದಷ್ಟೂ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನಾವಳಿಗಳಿಂದ ಮಹಾಮೈತ್ರಿ ಮುಂದುವರೆಸುವ ಸಾಧ್ಯತೆಗಳು ಇರಲಿಲ್ಲ. ನಾನು ಯಾರ ರಾಜೀನಾಮೆಯನ್ನೂ ಕೇಳಿರಲಿಲ್ಲ. ಡಿಸಿಎಂ ತೇಜಸ್ವಿ ಯಾದವ್, ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ. ಈ ಪರಿಸ್ಥಿತಿಯಲ್ಲಿ ಜನರಿಗೆ ಉತ್ತರಿಸಲು ಸಾಧ್ಯವಿರಲಿಲ್ಲ, ಅಂತರಾತ್ಮದ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ, ಮೈತ್ರಿಕೂಟದ ನಿಯಮ ಉಲ್ಲಂಘಿಸಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics