ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ನವದೆಹಲಿ: ಡಾರ್ಜಿಲಿಂಗ್ ಹಿಂಸಾಚಾರ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಹಲವು ದಿನಗಳಿಂದಲೂ ಮಳೆಯ ಆರ್ಭಟ ಜೋರಾಗಿದ್ದು, ಪುರುಲಿಯಾ, ಬಂಕುರಾ ಮತ್ತು ಪಶ್ಚಿಮ ಬುರ್ದ್ವಾನ್ ಜಿಲ್ಲೆಗಳಲ್ಲಿ ನಿನ್ನೆ ಕೂಡ ಭಾರೀ ಮಳೆ ಸುರಿದಿದೆ. ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಪಶ್ಚಿಮ ಮಿಡ್ನಾಪುರದಲ್ಲಿರುವ ಶಿಲಾಭಾಟಿ ನದಿ ಅಪಾಯಮಟ್ಟಕ್ಕೆ ತಲುಪಿದ್ದು, ಪರಿಸ್ಥಿತಿ ಮತ್ತಷ್ಟು ಹದೆಗೆಡುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಡಾರ್ಜಿಲಿಂಗ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಕೂಡ ಮುಂದುವರೆದಿರುವ ಹಿನ್ನಲೆಯಲ್ಲಿ ನಿನ್ನೆ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿರುವ ಮಮತಾ ಬ್ಯಾನರ್ಜಿಯವರು ರಾಜ್ಯದಲ್ಲಿ ಎದುರಾಗಿರುವ ಈ ಎರಡೂ ಪರಿಸ್ಥಿತಿಗಳ ಕುರಿತಂತೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.