ದೇಶ

2 ಕೋಟಿ ರು. ಶುಲ್ಕ ಕೇಳಿದ ಜೇಠ್ಮಲಾನಿ, ಕೇಜ್ರಿವಾಲ್ ವಕೀಲ ಸ್ಥಾನಕ್ಕೆ ರಾಜಿನಾಮೆ

Sumana Upadhyaya
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಕೀಲ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಸುಪ್ರೀಂಕೋರ್ಟ್ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
ಅವರು ಅರವಿಂದ ಕೇಜ್ರಿವಾಲ್ ಪರ ವಕಾಲತ್ತು ವಹಿಸಿದ್ದರು. ನ್ಯಾಯಾಲಯದಲ್ಲಿ  ಜೇಟ್ಲಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಲು ವಕೀಲರಿಗೆ ಹೇಳಿರುವುದಾಗಿ ಕೇಜ್ರಿವಾಲ್ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಪರ ವಕಾಲತ್ತು ನಡೆಸುವುದರಿಂದ ಹಿಂದೆ ಸರಿಯಲು ಜೇಠ್ಮಲಾನಿ ನಿರ್ಧರಿಸಿದ್ದಾರೆ.
ಈ ಬಗ್ಗೆ ಕೇಜ್ರಿವಾಲ್ ಗೆ ಬರೆದಿರುವ ಪತ್ರದಲ್ಲಿ, ತಮ್ಮ ವಕಾಲತ್ತು ಶುಲ್ಕವಾಗಿ 2 ಕೋಟಿ ರೂಪಾಯಿಗಳಷ್ಟು ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ.
ಪತ್ರದಲ್ಲಿ ಬರೆದಿರುವ ಬಗ್ಗೆ ಹೆಚ್ಚು ವಿವರ ನೀಡುವುದಿಲ್ಲ ಎಂದು ಜೇಠ್ಮಲಾನಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಅಫಿಡವಿಟ್ಟಿನಲ್ಲಿ, ಒಬ್ಬ ಹಿರಿಯ ವಕೀಲರಿಗೆ ನ್ಯಾಯಾಲಯದಲ್ಲಿ ಅವಹೇಳನಕಾರಿ ಪದ ಬಳಸಲು ತಾನು ಸೂಚನೆ ನೀಡಿದ್ದೇನೆ ಎಂಬುದನ್ನು ಊಹಿಸಲೂ ಕೂಡ ಅಸಾಧ್ಯ ಎಂದು ಹೇಳಿದ್ದರು.
ಕಳೆದ ಮೇ 18ರಂದು ರಾಮ್ ಜೇಟ್ಮಲಾನಿ ನ್ಯಾಯಾಲಯದಲ್ಲಿ ಅರವಿಂದ ಕೇಜ್ರಿವಾಲ್ ಪರ ವಕಾಲತ್ತು ವಹಿಸಿ ಮಾತನಾಡುವಾಗ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ವಂಚಕ ಎಂದು ಕರೆದಿದ್ದರು. ಅದಕ್ಕೆ ಅರುಣ್ ಜೇಟ್ಲಿಯವರು ಅರವಿಂದ ಕೇಜ್ರಿವಾಲ್ ವಿರುದ್ಧ 10 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಕೇಸನ್ನು ಕೋರ್ಟ್ ನಲ್ಲಿ ದಾಖಲಿಸಿದ್ದರು.
SCROLL FOR NEXT