ದೇಶ

ಬೆಳಗ್ಗೆ 10ಕ್ಕೆ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ!

Srinivasamurthy VN

ಪಾಟ್ನಾ: ಬಿಹಾರದಲ್ಲಿನ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಗುರುವಾರ ಸಂಜೆ ನಡೆಯಬೇಕಿದ್ದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಮಯವನ್ನು ದಿಢೀರ್ ಬದಲಾವಣೆ  ಮಾಡಲಾಗಿದ್ದು,. ಬೆಳಗ್ಗೆ 10 ಗಂಟೆಗೇ ಪ್ರಮಾಣ ವಚನ ನೆರವೇರಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಒಂದು ತಿಂಗಳಿನಿಂದ ಜೆಡಿಯು, ಆರ್ ಜೆಡಿ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಕೊನೆಗೂ ಸಿಎಂ ನಿತೀಶ್ ಕುಮಾರ್ ಮಂಗಳ ಹಾಡಿದ್ದು, ಜೆಡಿಯು, ಆರ್ ಜೆಡಿ ಮೈತ್ರಿಕೂಟದಿಂದ ಹೊರಬಂದು ತಮ್ಮ ಸಿಎಂ ಸ್ಥಾನಕ್ಕೆ  ರಾಜಿನಾಮೆ ನೀಡಿದ್ದಾರೆ. ಅಂತೆಯೇ ತಮ್ಮ ಹಳೆಯ ಮಿತ್ರ  ಬಿಜೆಪಿಯೊಂದಿಗೆ ಸೇರಿ ಮತ್ತೆ ಬಿಹಾರದ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನಿನ್ನೆ ಇಂದು ಸಂಜೆ ಪ್ರಮಾಣ ವಚನ  ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿತ್ತಾದರೂ, ದಿಢೀರ್ ಬೆಳವಣಿಗೆಯಲ್ಲಿ ಕಾರ್ಯಕ್ರಮವನ್ನು ಇಂದು ಬೆಳಗ್ಗೆ 10 ಗಂಟೆಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ ಈಗಾಗಲೇ ಬಿಜೆಪಿ ಪಕ್ಷ ನಿತೀಶ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿ ಫ್ಯಾಕ್ಸ್ ಮೂಲಕ ಬಿಹಾರ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರಿಗೆ ರವಾನಿಸಿದ್ದು, ಬಿಜೆಪಿಯ 53 ಶಾಸಕರ ಬೆಂಬಲ ನಿತೀಶ್  ಕುಮಾರ್ ಅವರಿಗಿದೆ ಎಂದು ಹೇಳಲಾಗಿದೆ. ಜೆಡಿಯು ಬಳಿ 71 ಶಾಸಕರ ಬೆಂಬಲವಿದ್ದು, ಸರ್ಕಾರ ರಚನೆಗೆ 122 ಸ್ಥಾನಗಳ ಅಗತ್ಯತೆ ಇದೆ. ಬಿಜೆಪಿ ಮತ್ತು ಜೆಡಿಯು ಮೈತ್ರಿಯಾದರೆ ಅವುಗಳ ಒಟ್ಟು ಗಾತ್ರ 124 ರನ್ ಗಳಿಗೇರುತ್ತದೆ.

ಈ ಹಿಂದೆ ನಿತೀಶ್ ಕುಮಾರ್ ಅವರಿಗೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದ ಬಿಜೆಪಿ ಕಳೆದ ರಾತ್ರಿ ನಡೆದ ಮ್ಯಾರಥಾನ್ ಸಭೆ ಬಳಿಕ ತಾನೂ ಕೂಡ ಸರ್ಕಾರದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೆ ನೀಡಿದೆ. ಅದರಂತೆ ಇಂದಿನ  ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಹಾರ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಅವರು ಕೂಡ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

SCROLL FOR NEXT