ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಧರಂ ಸಿಂಗ್ ಅವರ ಸಾವಿನ ದುಃಖವನ್ನು ತಡೆಯುವ ಶಕ್ತಿ ಅವರ ಕುಟುಂಬಕ್ಕೆ ದೇವರ ಕರುಣಿಸಲಿ ಎಂದು ಮೋದಿ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಧರಂ ಸಿಂಗ್ ಅವರ ನಿಧನದ ವಾರ್ತೆ ಕೇಳಿ ನಿಜಕ್ಕೂ ಆಘಾತವಾಯಿತು. ಅವರ ಸಾವು ನೋವು ತಂದಿದ್ದು, ಅವರ ಕುಟುಂಬಕ್ಕೆ ನೋವು ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ. ಅವರ ಕುಟುಂಬದೊಂದಿಗೆ ನಾವಿದ್ದು, ದುಃಖದಲ್ಲಿ ಭಾಗಿಯಾಗುತ್ತೇವೆ. ಧರಂ ಸಿಂಗ್ ಅವರು ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದವರಾಗಿದ್ದರು. ರಾಷ್ಟ್ರ ರಾಜಕಾರಣದಲ್ಲೂ ಸಾಕಷ್ಟು ಅನುಭವ ಹೊಂದಿದ್ದರು. ಸಮಾಜಕ್ಕೆ ಅವರು ನೀಡಿದ್ದ ಕೊಡುಗೆಗಳು ಶಾಶ್ವತವಾಗಿ ನೆನಪಿನಲ್ಲಿರುವತ್ತವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
80 ವರ್ಷ ವಯಸ್ಸಿನ ಧರಂ ಸಿಂಗ್ ಅವರು ಇಂದು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಇದೀಗ ಅವರ ಪಾರ್ಥೀವ ಶರೀರವನ್ನು ಸದಾಶಿವ ನಗರದ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಧರಂ ಸಿಂಗ್ ಅವರ ತವರು ಜಿಲ್ಲೆ ಜೇವರ್ಗಿಗೆ ರವಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.