ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಂಕರ್ ಸಿಂಗ್ ವಘೇಲಾ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ಹಲವು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುತ್ತಿದ್ದು, ಕಾಂಗ್ರೆಸ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಇಂದು ಮತ್ತೋರ್ವ ಕಾಂಗ್ರೆಸ್ ಶಾಸಕ ರಾಮಸಿಂಗ್ ಪರಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಆರು ಶಾಸಕರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಅಲ್ಲದೆ ಇನ್ನುಷ್ಟು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್ ಶಾಸಕರಾದ ಮಾನಸಿನ್ಹಾ ಚೌಹ್ವಾಣ್ ಹಾಗೂ ಛನಭಾಯಿ ಚೌಧರಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಿನ್ನೆ ವಘೇಲಾ ಅವರ ಹತ್ತಿರ ಸಂಬಂಧಿ ಬಲವಂತ್ ಸಿಂಗ್ ರಜಪೂತ್ ಸೇರಿದಂತೆ ಮೂವರು ಶಾಸಕರು ರಾಜಿನಾಮೆ ನೀಡಿದ್ದರು.
ಗುಜರಾತ್ ನಲ್ಲಿ ಆಗಸ್ಟ್ 8ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಅಹಮ್ಮದ್ ಪಟೇಲ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ನಡುವೆ ಪಕ್ಷದ ಶಾಸಕರು ರಾಜಿನಾಮೆ ನೀಡುತ್ತಿರುವುದು ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics