ನವದೆಹಲಿ: ವೈದ್ಯಕೀಯ ವರದಿ ಪಡೆದ ನಂತರ 10 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಬಾಲಕಿ ಈಗಾಗಲೇ 36 ವಾರಗಳ ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿ ಗರ್ಭಪಾತ ಮಾಡಿದೆ ಬಾಲಕಿಯ ಜೀವಕ್ಕೆ ಅಪಾಯವಿದೆ ಎಂದು ವೈದ್ಯರ ಮಂಡಳಿ ನೀಡಿದ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೆಹರ್ ಹಾಗೂ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಗಂಭೀರವಾಗಿ ಪರಿಗಣಿಸಿ, ಅರ್ಜಿಯನ್ನು ವಜಾಗೊಳಿಸಿದೆ.
ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೋರ್ಟ್, ಗರ್ಭಪಾತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯಗಳು ಶಾಶ್ವತ ವೈದ್ಯಕೀಯ ಮಂಡಳಿಯೊಂದನ್ನು ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಿ. ಇಂತಹ ಪ್ರಕರಣಗಳು ಸುಪ್ರೀಂ ಕೋರ್ಟ್ ತಲುಪಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಗೆ ಸೂಚಿಸಿದೆ.
ಬಾಲಕಿಯು 26 ವಾರಗಳ ಗರ್ಭಿಣಿ ಎಂಬುದು ದೃಢಪಟ್ಟಿದ್ದರಿಂದ, ಚಂಡೀಗಡದ ಸ್ಥಳೀಯ ನ್ಯಾಯಾಲಯ ಗರ್ಭಪಾತ ಮಾಡಿಸಿಕೊಳ್ಳಲು ಜುಲೈ18ರಂದು ಅವಕಾಶ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿತ್ತು.
ಹಲವು ಬಾರಿ ಸೋದರ ಮಾವನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಈಗ 36 ವಾರಗಳ ಗರ್ಭಿಣಿಯಾಗಿದ್ದಾಳೆ. 10 ವರ್ಷಕ್ಕೆ ಬಾಲಕಿ ಗರ್ಭಧರಿಸುವುದು ವೈದ್ಯರಲ್ಲೂ ಅಚ್ಚರಿ ಮೂಡಿಸಿದ್ದು, ಇಂಥ ಪ್ರಕರಣಗಳಲ್ಲಿ ಸಹಜ ಹೆರಿಗೆ ದೂರದ ಮಾತು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದೂ ಅತ್ಯಂತ ಅಪಾಯ.