ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲೂ ಪ್ರಸಾದ್
ಪಾಟ್ನ: ಮಹಾಮೈತ್ರಿ ಮುರಿಯುವುದಕ್ಕೂ ಮುನ್ನ ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಬಳಿ ಕ್ಷಮೆ ಕೇಳಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ದಿಢೀರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ನಿತೀಶ್ ಕುಮಾರ್ ಅವರು ಆರ್ ಜೆಡಿ, ಜೆಡಿಯು, ಕಾಂಗ್ರೆಸ್ ಮಹಾಮೈತ್ರಿಕೂಟದಿಂದ ಹೊರಬಂದಿದ್ದರು. ರಾಜಿನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ನಿತೀಶ್ ಕುಮಾರ್ ಅವರಿಗೆ ಬೆಂಬಲ ಘೋಷಿಸಿತ್ತು. ಇದರಂತೆ ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ್ದ ನಿತೀಶ್ ಕುಮಾರ್ ಅವರು ಮತ್ತೆ ಬಿಹಾರ ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.
ಮಹಾಮೈತ್ರಿ ಮುರಿಯುವುದಕ್ಕೂ 10 ನಿಮಿಷಗಳಿಗೂ ಮುನ್ನ ನಿತೀಶ್ ಕುಮಾರ್ ಅವರು ಲಾಲೂ ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. ದೂರವಾಣಿ ಮೂಲಕ ಲಾಲೂ ಜೊತೆಗೆ ಮಾತನಾಡಿದ್ದ ನಿತೀಶ್ ಅವರು, ಲಾಲೂ ಜೀ... ನನ್ನನ್ನು ಕ್ಷಮಿಸಿ. 20 ತಿಂಗಳ ಕಾಲ ಮಹಾಮೈತ್ರಿಯೊಂದಿಗೆ ಸರ್ಕಾರ ನಡೆಸಿದ್ದೆ. ಇದೀಗ ನನ್ನಿಂದ ಸಾಧ್ಯವಾಗುತ್ತಿಲ್ಲ. ಮಹಾಮೈತ್ರಿಯನ್ನು ಮುರಿಯುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಲಾಲೂ ಅವರು ಈ ರೀತಿಯ ನಿರ್ಧಾರ ಬೇಡವೆಂದು ಮನವಿ ಮಾಡಿದ್ದಾರೆ. ಆದರೆ, ನಿತೀಶ್ ಅವರು ತಮ್ಮ ನಿರ್ಧಾರವನ್ನು ಬಿಗಿಗೊಳಿಸಿ ಮಹಾಮೈತ್ರಿಯಿಂದ ಹೊರಬಂದಿದ್ದರು ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಶುಕ್ರವಾರವಷ್ಟೇ ಬಿಜೆಪಿ ನೇತೃತ್ವದಲ್ಲಿ ನೂತನ ಸರ್ಕಾರವನ್ನು ರಚನೆ ಮಾಡಿದ್ದ ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಿನ್ನೆ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದರು.
ರಾಜಭವನದಲ್ಲಿ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರಿಂದ ಬಿಜೆಪಿ ಮತ್ತು ಜೆಡಿಯುದ 27 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ಜೆಡಿಯು ಪಕ್ಷದ 14, ಬಿಜೆಪಿಯ 12, ಎಲ್'ಜೆಪಿ ಒಬ್ಬರು ಸೇರಿದ್ದಾರೆ. ಆದರೆ, ಸಂಪುಟ ವಿಸ್ತರಣೆ ವೇಳೆ ಎನ್ ಡಿಎದ ಎರಡು ಮಿತ್ರ ಪಕ್ಷಗಳಾದ ಆರ್'ಎಲ್ಎಸ್ ಪಿ ಮತ್ತು ಎಚ್ ಎಎಂಗೆ ಯಾವುದೇ ಸಚಿವ ಸ್ಥಾನ ನೀಡಲಾಗಿಲ್ಲ. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಬಳಿಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಸುಶೀಲ್ ಮೋದಿಯವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 243 ಸದಸ್ಯದ ಬಲಹ ಬಿಹಾರ ಸರ್ಕಾರ ಗರಿಷ್ಠ 37 ಸಚಿವರನ್ನು ಹೊಂದುವುದಕ್ಕೆ ಅವಕಾಶವಿದೆ.