ಜವಹರಲಾಲ್ ನೆಹರೂ ಮತ್ತು ಎಡ್ವಿನಾ ಮೌಂಟ್ಬ್ಯಾಟನ್ (ಫೋಟೋ ಕೃಪೆ-ಇಎನ್.ವಿಕಿಪೀಡಿಯಾ.ಒಆರ್ ಜಿ)
ನವದೆಹಲಿ: ಭಾರತದ ಮೊದಲ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂ ಮತ್ತು ಭಾರತದ ಕೊನೆಯ ವೈಸ್ರೀನ್ ಎಡ್ವಿನಾ ಮೌಂಟ್ಬ್ಯಾಟನ್ ಅವರು ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಆದರೆ ಅವರಿಬ್ಬರ ಮಧ್ಯೆ ದೈಹಿಕ ಸಂಬಂಧವಿರಲಿಲ್ಲ, ಯಾವತ್ತೂ ಅವರು ಏಕಾಂಗಿಯಾಗಿ ಇರುತ್ತಿರಲಿಲ್ಲ ಎಂದು ಮೌಂಟ್ ಬ್ಯಾಟನ್ ಪುತ್ರಿ ಹೇಳಿದ್ದಾರೆ.
ಭಾರತದ ಕೊನೆಯ ವೈಸ್ರಾಯ್ ಆಗಿ ಲಾರ್ಡ್ ಮೌಂಟ್ಬ್ಯಾಟನ್ ಬಂದಾಗ ಅವರ ಮಗಳು ಪಮೇಲಾ ಹಿಕ್ಸ್ ನೀ ಮೌಂಟ್ಬ್ಯಾಟನ್ ಗೆ 17 ವರ್ಷ ವಯಸ್ಸು. ಆ ಬಳಿಕ ಪ್ರಧಾನಿಯಾಗಿದ್ದ ಜವಹರಲಾಲ ನೆಹರೂ ಮತ್ತು ಆಕೆಯ ತಾಯಿ ಎಡ್ವಿನಾ ಆಶ್ಲೆ ಮೌಂಟ್ಬ್ಯಾಟನ್ ನಡುವೆ ಗಾಢವಾದ ಸಂಬಂಧ ಬೆಳೆಯುವುದನ್ನು ಗಮನಿಸಿದಳು. ತನ್ನ ತಾಯಿ, ಪಂಡಿತ್ ಜವಹರಲಾಲ್ ನೆಹರೂರವರ ಹತ್ತಿರ ಗೆಳೆತನ, ಸಮಾನತೆಯ ಉತ್ಸಾಹ, ಅವಳು ಹಂಬಲಿಸಿದ ಬುದ್ಧಿಶಕ್ತಿಯನ್ನು ಕಂಡಿದ್ದಳು ಎಂದು ಪಮೇಲಾ ಹೇಳುತ್ತಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಕೆಗೆ ತನ್ನ ತಾಯಿ ಮತ್ತು ಜವಹರಲಾಲ್ ನೆಹರೂರವರ ನಡುವಿನ ಸಂಬಂಧದ ಕುರಿತು ತಿಳಿದುಕೊಳ್ಳುವ ಕುತೂಹಲವಿತ್ತು.
ನೆಹರೂರವರು ತನ್ನ ತಾಯಿಗೆ ಬರೆದ ಪತ್ರದಲ್ಲಿ ಅವರ ಭಾವನೆಗಳು ಮತ್ತು ಆಲೋಚನೆಗಳನ್ನು ಓದಿದಾಗ ಅವರಿಬ್ಬರು ಪರಸ್ಪರ ಎಷ್ಟು ಪ್ರೀತಿಸುತ್ತಿದ್ದಾರೆ ಮತ್ತು ಗೌರವಿಸುತ್ತಿದ್ದಾರೆ ಎಂದು ತಿಳಿಯಿತು ಎನ್ನುತ್ತಾರೆ ಪಮೇಲಾ.
ಅವರಿಬ್ಬರೂ ಲೈಂಗಿಕವಾಗಿ ಸಂಬಂಧ ಹೊಂದಿದ್ದರೇ ಎಂದು ಮಗಳು ಪಮೇಲಾ ತಿಳಿದುಕೊಳ್ಳಲು ಇಚ್ಛಿಸುತ್ತಿದ್ದಳು. ಆದರೆ ಇಬ್ಬರೂ ಬರೆದ ಪತ್ರ ಓದಿದ ಮೇಲೆ ಶಾರೀರಿಕವಾಗಿ ಅವರು ಸಂಬಂಧ ಹೊಂದಿರಲಿಲ್ಲ ಎಂಬುದು ಆಕೆಗೆ ಮನವರಿಕೆಯಾಯಿತಂತೆ. ಎಲ್ಲಕ್ಕಿಂತ ಹೆಚ್ಚಾಗಿ ಶಾರೀರಿಕ ಸಂಬಂಧ ಹೊಂದಲು ಇಬ್ಬರಿಗೂ ಸಮಯವಿರಲಿಲ್ಲ. ಅವರಿಬ್ಬರು ಏಕಾಂಗಿಯಾಗಿ ಭೇಟಿಯಾಗುತ್ತಿದ್ದುದು ತೀರಾ ಅಪರೂಪ. ಎಲ್ಲೇ ಹೋಗಲಿ ಅವರ ಸುತ್ತ ಸಿಬ್ಬಂದಿಗಳು, ಪೊಲೀಸರು ಮತ್ತು ಜನರು ಸುತ್ತ ಇರುತ್ತಿದ್ದರು. ಹಾಗಾಗಿ ಪರಸ್ಪರ ಭೇಟಿಗೆ ಅವಕಾಶ ಸಿಗುತ್ತಿರಲಿಲ್ಲ ಎಂದು ಪಮೇಲಾ ಬರೆದಿರುವ ''Daughter of Empire: Life as a Mountbatten" ಪುಸ್ತಕದಲ್ಲಿ ನಮೂದಿಸಿದ್ದಾರೆ.
ಮೊದಲ ಬಾರಿಗೆ ಈ ಪುಸ್ತಕ ಇಂಗ್ಲೆಂಡ್ ನಲ್ಲಿ 2012ರಲ್ಲಿ ಪ್ರಕಟವಾಯಿತು. ಅದನ್ನು ಭಾರತಕ್ಕೆ ಹ್ಯಾಚೆಟ್ಟೆ ತಂದಿದ್ದರು.
ನೆಹರೂ ಮತ್ತು ಎಡ್ವಿನಾ ಅವರು ಜೀವನದ ಶೈಲಿ ಹೆಚ್ಚು ಸಾರ್ವಜನಿಕವಾಗಿದ್ದರಿಂದ ಅವರಿಬ್ಬರ ಮಧ್ಯೆ ಪ್ರೀತಿ, ಪ್ರೇಮ, ಲೈಂಗಿಕತೆ ಇತ್ಯಾದಿಗಳು ನಡೆಯಲು ಸಾಧ್ಯವಿಲ್ಲ ಎಂದು ಲಾರ್ಡ್ ಮೌಂಟ್ಬ್ಯಾಟನ್ ಅವರ ಮಿಲಿಟರಿ ಅಧಿಕಾರಿ ಫ್ರೆಡ್ಡಿ ಬರ್ನಬಿ ಅಟ್ಕಿನ್ಸ್ ಪಮೇಲಾಗೆ ಹೇಳಿದ್ದಾರೆ.
ಎಡ್ವಿನಾ ಅವರು ಭಾರತವನ್ನು ತೊರೆಯುವಾಗ ನೆಹರೂರವರಿಗೆ ಹಸಿರು ಬಣ್ಣದ ಉಂಗುರ ನೀಡಲು ಬಯಸಿದ್ದರಂತೆ. ಆದರೆ ಅದನ್ನು ನೆಹರೂರವರು ಸ್ವೀಕರಿಸುವುದಿಲ್ಲ ಎಂದು ಆಕೆಗೆ ಗೊತ್ತಿತ್ತು. ಹಾಗಾಗಿ ಅದನ್ನು ಅವರ ಮಗಳು ಇಂದಿರಾ ಗಾಂಧಿಯವರಿಗೆ ನೀಡಿ, ನೆಹರೂರವರಿಗೆ ಏನಾದರೂ ಆರ್ಥಿಕ ಸಮಸ್ಯೆಯುಂಟಾದರೆ ಅದನ್ನು ಮಾರಾಟ ಮಾಡುವಂತೆ ಎಡ್ವಿನಾ ಹೇಳಿದ್ದರೆಂದು ಪಮೇಲಾ ಪುಸ್ತಕದಲ್ಲಿ ವಿವರಿಸಿದ್ದಾರೆ.
ಮೌಂಟ್ಬ್ಯಾಟನ್ ಅವರಿಗೆ ವಿದಾಯ ಸಮಾರಂಭ ಮಾಡಿದ ಸಂದರ್ಭದಲ್ಲಿ ಭಾಷಣ ಮಾಡಿ ಮಾತನಾಡುತ್ತಾ ನೆಹರೂರವರು ನೇರವಾಗಿ ಎಡ್ವಿನಾ ಅವರಿಗೆ ನೀವು ಎಲ್ಲಿಗೇ ಹೋಗಲಿ, ಸಮಾಧಾನ, ಆಶಾವಾದ ಮತ್ತು ಪ್ರೋತ್ಸಾಹವನ್ನು ತಂದಿದ್ದೀರಿ. ಹೀಗಾಗಿ ಭಾರತದ ಜನರು ನಿಮ್ಮನ್ನು ಗೌರವಿಸಬೇಕು, ತಮ್ಮಲ್ಲಿ ನಿಮ್ಮನ್ನು ಕಾಣಬೇಕು ಮತ್ತು ನೀವು ಭಾರತವನ್ನು ಬಿಟ್ಟು ಹೋಗುವಾಗ ದುಃಖಪಡಬೇಕು ಎಂದು ನೆಹರೂರವರು ಹೇಳಿದ್ದರಂತೆ.