ಇಸ್ಲಾಮಾಬಾದ್: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಅಲ್ಲಿನ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಚಿವ ಶಾಹಿದ್ ಖಾಕನ್ ಅಬ್ಬಾಸಿ ಆಯ್ಕೆಯಾಗಿದ್ದಾರೆ.
ಹಾಲಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಸುಪ್ರೀಂ ಕೋರ್ಟ್ ಭ್ರಷ್ಟಾಚಾರದ ಆರೋಪ ಅಡಿಯಲ್ಲಿ ಅನರ್ಹಗೊಳಿಸಿದ ನಾಲ್ಕು ದಿನಗಳ ನಂತರ ಅಲ್ಲಿನ ಸಂಸತ್ ನಲ್ಲಿ ಹಂಗಾಮಿ ಪ್ರಧಾನಿಯ ನೇಮಕಕ್ಕಾಗಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಪಾಕಿಸ್ತಾನದ ಸಂಸದರು ಬಹುಮತದಿಂದ ಶಾಹಿದ್ ಖಾಕನ್ ಅಬ್ಬಾಸಿ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ.
ಶಾಹಿದ್ ಖಾಕನ್ ಅಬ್ಬಾಸಿ ಪರ 221 ಮತಗಳು ಚಲಾವಣೆಯಾಗಿದ್ದು, ನವಾಜ್ ಷರೀಫ್ ಅವರ ಸಹೋದರ ಶಾಬಾಜ್ ಷರೀಫ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವವರೆಗೆ ಅಬ್ಬಾಸಿ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.