ನವದೆಹಲಿ: ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಬಿಹಾರದ ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಸರಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪರದಾಡಿದ್ದರು. ಇದಾದ ಒಂದು ವರ್ಷಕ್ಕೆ ಮತ್ತೊಂದು ಟಾಪರ್ ಹಗರಣ ಬೆಳಕಿಗೆ ಬಂದಿದ್ದು, ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಟಾಪರ್ ಆಗಿರುವ ಗಣೇಶ್ ಕುಮಾರ್ ತನ್ನ ಜನ್ಮದಿನಾಂಕದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.
ತಾನು 24 ವರ್ಷದವನೆಂದು ಹೇಳಿಕೊಂಡಿದ್ದ ಪಿಯು ಟಾಪರ್ ಗಣೇಶ್ ಕುಮಾರ್ ಗೆ 41 ವರ್ಷದವನಾಗಿದ್ದು ಇಬ್ಬರು ಮಕ್ಕಳನ್ನೂ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಜನ್ಮದಿನಾಂಕವನ್ನು ತಿದ್ದಿದ ಆರೋಪದಡಿ ಬಿಹಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.64.75 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದರೆ ಗಣೇಶ್ ಕುಮಾರ್ ಮಾತ್ರ ಶೇ.82.6 ರಷ್ಟು ಅಂಕ ಗಳಿಸಿದ್ದು, ಮೊದಲ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದ ಟಾಪರ್ ನ ಫಲಿತಾಂಶವನ್ನು ಬಿಎಸ್ಇಬಿ ತಡೆ ಹಿಡಿದಿದ್ದು, ಹಳೆಯ ಕಡತಗಳನ್ನು ಪರಿಶೀಲನೆ ನಡೆಸಿದಾಗ ಗಣೇಶ್ ಕುಮಾರ್ 1990 ರಲ್ಲಿ ಹಾಗೂ 1992 ರಲ್ಲಿ ಎರಡನೇ ದರ್ಜೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ತೇರ್ಗಡೆಗೊಂಡಿದ್ದರು ಎಂಬುದು ತಿಳಿದುಬಂದಿದೆ. ಈ ಬಾರಿ ತನ್ನ ಜನ್ಮದಿನಾಂಕವನ್ನು ತಿದ್ದು ನ.7, 1975 ಎಂದು ನಮೂದಿಸಿದ್ದಾರೆ. ಅಷ್ಟೇ ಅಲ್ಲದೇ 2015 ರಲ್ಲಿ ಮತ್ತೊಮ್ಮೆ 10 ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಅಲ್ಲಿ ಜೂ.2 1993 ಎಂದು ನಮೂದಿಸಿರುವುದು ಬೆಳಕಿಗೆ ಬಂದಿದೆ.
ಸಂಗೀತ ಪ್ರಾಯೋಗಿಕ ವಿಷಯದಲ್ಲಿ 70 ಕ್ಕೆ 65 ಅಂಕಗಳನ್ನು ಪಡೆದಿದ್ದರು. ಆದರೆ ಹಾರ್ಮೋನಿಯಂ ನಲ್ಲಿ ಅವರ ಪ್ರದರ್ಶನವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ನಂತರ ಅನುಮಾನ ಪ್ರಾರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು.