ನವದೆಹಲಿ: ಸೇನಾ ಕಾರ್ಯಾಚರಣೆಗಳ ಭಾರತೀಯ ಸೇನಾ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್ಟ್, ಇಂದು ಪಾಕಿಸ್ತಾನ ಸೇನೆಯ ಮಹಾ ನಿರ್ದೇಶಕರನ್ನು ಭೇಟಿ ಮಾಡಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಸದ್ಯದ ಸ್ಥಿತಿ ಬಗ್ಗೆ ಚರ್ಚೆ ನಡೆಸಿದರು. ಪಾಕಿಸ್ತಾನ ಸೈನ್ಯ ಅನಗತ್ಯವಾಗಿ ಗಡಿ ನಿಯಂತ್ರಣ ರೇಖೆ ಬಳಿ ನಡೆಸುತ್ತಿರುವ ಕದನದ ಬಗ್ಗೆ ಪ್ರಸ್ತಾಪಿಸಿದರು.
ಗಡಿಯಲ್ಲಿ ಶಾಂತಿ ಮರುಕಳಿಸಲು ತಮ್ಮ ಬದ್ಧತೆಯನ್ನು ತಿಳಿಸಿದ ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್, ಪಾಕಿಸ್ತಾನಿ ಸೈನ್ಯದ ಉದ್ದೇಶಗಳು ಮತ್ತು ಕ್ರಮಗಳ ಮೇಲೆ ಶಾಂತಿ ನೆಲೆಸುವ ಅಗತ್ಯತೆಯನ್ನು ಸಾರಿದರು.
ಪಾಕಿಸ್ತಾನ ಸೇನೆ ಒಳನುಸುಳುವಿಕೆಯ ಅಭ್ಯಾಸವನ್ನು ಮುಂದುವರಿಸಿ ಗಡಿಯಲ್ಲಿ ಗುಂಡಿನ ದಾಳಿಗೆ ಕಾರಣವಾದರೆ ಅದನ್ನು ಸದೆಬಡಿಯಲು ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಜನರಲ್ ಭಟ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಪಾಕಿಸ್ತಾನ ಸೇನೆ ಅನಗತ್ಯವಾಗಿ ಗಡಿ ನಿಯಂತ್ರಣ ರೇಖೆ ಬಳಿ ಯುದ್ಧ ಮಾಡುವುದು, ಒಳ ನುಸುಳುವುದನ್ನು ಖಂಡಿಸಿದರು.
ನಾಗರಿಕರ ಹತ್ಯೆ ವಿಷಯವನ್ನು ಪಾಕಿಸ್ತಾನ ಸೇನೆ ಎತ್ತಿದಾಗ, ಅದಕ್ಕೆ ಉತ್ತರ ನೀಡಿದ ಭಾರತೀಯ ಸೇನೆಯ ಮಹಾ ನಿರ್ದೇಶಕ, ಭಾರತೀಯ ಸೇನೆ ವೃತ್ತಿಪರವಾಗಿದ್ದು ನಾಗರಿಕರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆ ನೀಡುವುದಿಲ್ಲ ಎಂದು ಹೇಳಿದ್ದಾರೆ.