ಜೈಪುರ: ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಅವರನ್ನು ಟೀಕಿಸಿದ್ದ ಅಲ್ಲಿನ ಬಿಜೆಪಿ ಶಾಸಕ ಘನಶಾಮ್ ತಿವಾರಿ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾವನ್ನು ಪ್ರಶ್ನಿಸಿದ್ದಾರೆ.
ಅಭಿವೃದ್ಧಿಯೆಂಬುದು ಕೇವಲ ಕಾರ್ಪೊರೇಟ್ ಹೌಸ್ ಗಳಿಗೆ ಮಾತ್ರ ಸೀಮಿತವಾಗುತ್ತಿದೆಯೇ ಎಂದು ಪ್ರಧಾನಿ ಮೋದಿ ಅವರ ಅಭಿವೃದ್ಧಿಯ ಅಜೆಂಡಾವನ್ನು ಘನಶಾಮ್ ತಿವಾರಿ ಕೇಳಿದ್ದಾರೆ. ನಮ್ಮ ದೇಶದ ಬಹುತೇಕ ಸಂಪತ್ತು ಕೇವಲ ಕೆಲವರು ಮಾತ್ರ ಹೊಂದಿದ್ದಾರೆ. ಅಭಿವೃದ್ಧಿಯೆಂಬುದು ಕೇವಲ ಕೆಲವು ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಸೀಮಿತವೇ ಎಂದು ತಿವಾರಿ ಪ್ರಶ್ನಿಸಿದ್ದಾರೆ.
ದೇಶ ಇಂದು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ ಸಾಮಾನ್ಯ ಜನರ ಅಭಿವೃದ್ಧಿಯಾಗಿಲ್ಲ ಎಂದು ತಿವಾರಿ ಹೇಳಿದ್ದಾರೆ. ಸಾಲ ಇಲ್ಲದ ರೈತ ಈ ದೇಶದಲ್ಲಿ ಕಾಣಸಿಗುವುದಿಲ್ಲ. ರೈತರು ಬೆಳೆದ ಬೆಳೆಗಳನ್ನು ರಸ್ತೆಯಲ್ಲಿ ಎಸೆಯುವ ಸ್ಥಿತಿ ನಿರ್ಮಾಣವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ದೇಶ ಈಗ ಕೇಂದ್ರಿತ ಬಂಡವಾಳಶಾಹಿಗಳ ಕೈಯಲ್ಲಿದೆ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.