ದೇಶ

ಉತ್ತರಪ್ರದೇಶದಲ್ಲಿ ಕೋಮು ಘರ್ಷಣೆ; ಓರ್ವ ವ್ಯಕ್ತಿ ಮೃತ

Guruprasad Narayana
ಲಖನೌ: ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಸಣ್ಣ ಘಟನೆಯೊಂದು ಕೋಮು ಘರ್ಷಣೆಯ ಸ್ವರೂಪ ಪಡೆದು, ಒಬ್ಬನ ಸಾವಿಗೆ ಕಾರಣವಾಗಿದ್ದು, ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ. 
ನಸೀಮ್ ಪುರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಪ್ರಾರ್ಥನೆಗೆ ತೆರಳುವಾಗ ಅವನ ಮೇಲೆ ಮತ್ತೊಬ್ಬ ವ್ಯಕ್ತಿ ನೀರು ಎರಚಿದ ಘಟನೆ ಸೋಮವಾರ ಮಧ್ಯಾಹ್ನ ಉದ್ವಿಘ್ನತೆಗೆ ಎಡೆಮಾಡಿಕೊಟ್ಟಿತ್ತು. ಇದು ಸೋಮವಾರ ರಾತ್ರಿ ಘರ್ಷಣೆಯನ್ನು ಉಲ್ಬಣಗೊಳಿಸಿತ್ತು. 
ನಂತರ ತಡರಾತ್ರಿ ಎರಡು ಗುಂಪುಗಳು ಮುಖಾಮುಖಿಯಾಗಿ ಒಬ್ಬರ ಮೇಲೊಬ್ಬರು ಗುಂಡು ಹಾರಿಸಿದ್ದರು. ಇದರಿಂದ ತಂದೆ ಪುತ್ರನಿಗೆ ಗುಂಡು ತಗುಲಿತ್ತು. 
ಪುತ್ರ ಅಶೋಕ್ ಅವರಿಗೆ ಗಂಭೀರ ಗಾಯಗಳಾಗಿದ್ದರಿಂದ ಅವರನ್ನು ಅದೇ ಸ್ಥಿತಿಯಲ್ಲಿ ಮೀರತ್ ನಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ಬ್ರಜ್ ಲಾಲ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು ಅವರು ಕೂಡ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. 
ಈ ಘಟನೆಗೂ ಮುಂಚಿತವಾಗಿ ಗ್ರಾಮ ಪಂಚಾಯಿತಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಿತ್ತಾದರೂ, ರಾತ್ರಿಯ ಹೊತ್ತಿಗೆ ಘರ್ಷಣೆಯ ಕಿಡಿ ಮತ್ತೆ ಹೊತ್ತಿಕೊಂಡಿತ್ತು. ನಂತರ ಈ ಘಟನೆ ಕೆಟ್ಟ ತಿರುವು ಪಡೆದು ಕೋಮು ಘರ್ಷಣೆಯ ರೂಪ ತಳೆಯಿತು ಎಂದು ಪೊಲೀಸರು ಹೇಳಿದ್ದಾರೆ. 
ಹಿಂಸೆ ವ್ಯಾಕವಾಗದಂತೆ ತಡೆಯಲು ಎಚ್ಚರವಹಿಸಿ ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT