ಅಲಪ್ಪುಜಾ: ಕೇರಳ ಸಿಪಿಎಂ ನಾಯಕ ಮತ್ತು ಕೇರಳ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಜಿ.ಸುಧಾಕರನ್ ರಾಮಾಯಣ ಮಹಾಕಾವ್ಯದ ಬಗ್ಗೆ ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ಬಿಸಿ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಅವರ ಪ್ರಕಾರ, ರಾವಣ ರಾಮನಿಗಿಂತ ಸಂಭಾವಿತ ವ್ಯಕ್ತಿ. ಮೊನ್ನೆ ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ರಾಮ ಹೇಗೆ ಸಂಭಾವಿತ ವ್ಯಕ್ತಿ ಎನಿಸುತ್ತಾನೆ. ಅವನು ತನ್ನ ಮಡದಿ ಸೀತೆಯನ್ನು ಸೋದರನ ಜೊತೆ ಆ ದಟ್ಟ ಅರಣ್ಯದಲ್ಲಿ ಬಿಟ್ಟು ಹೋಗಿರಲಿಲ್ಲವೇ? ಜಿಂಕೆಯನ್ನು ಹುಡುಕಲು ತನ್ನ ಅತ್ತಿಗೆಯನ್ನು ಆ ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಹೋದ ಲಕ್ಷ್ಮಣ ಮಾಡಿದ್ದು ಕೂಡ ಸರಿಯಲ್ಲ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ರಾವಣ ಸೀತೆಯ ಜೊತೆ ಮೃದುವಾಗಿ ಸಂಭಾವಿತನಾಗಿ ನಡೆದುಕೊಳ್ಳುತ್ತಾನೆ. ನಂತರ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿದ ರಾವಣ ಆಕೆಯನ್ನು ಅಶೋಕ ಮರದ ಕೆಳಗೆ ಇರಿಸುತ್ತಾನೆ. ಆಕೆಯನ್ನು ಒಂದು ಬಾರಿ ಕೂಡ ಮುಟ್ಟುವ ಪ್ರಯತ್ನ ಸಹ ಮಾಡುವುದಿಲ್ಲ. ಇಂದಿನ ರಾಮರು ರಾವಣನ ಈ ಉತ್ತಮ ಗುಣಗಳನ್ನು ತಿಳಿದುಕೊಳ್ಳಬೇಕು ಎಂದು ಸಚಿವರು ಹೇಳಿದ್ದರು.
ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡಿದ ಸನ್ಯಾಸಿಯ ಜನನಾಂಗವನ್ನು ಕತ್ತರಿಸಿದ ತಿರುವನಂತಪುರಂ ಮೂಲದ ಬಾಲಕಿಯ ಧೈರ್ಯವನ್ನು ಪ್ರಶಂಸಿಸಿ ಬಾಲಕಿಗೆ ಪ್ರಶಸ್ತಿ ನೀಡಬೇಕೆಂದು ಹೇಳಿದರು.
ಬಾಲಕಿಯ ತಾಯಿ ದೊಡ್ಡ ತಪ್ಪು ಮಾಡಿದ್ದಾರೆ. ತನ್ನ ಮನೆಯಲ್ಲಿ ಬೆಳೆದು ನಿಂತ ಮಗಳಿದ್ದಾಳೆ ಎಂದು ಗೊತ್ತಿದ್ದರೂ ಕೂಡ ಸನ್ಯಾಸಿಗೆ ಆಶ್ರಯ ನೀಡಿದ್ದೇಕೆ? ಮಹಿಳಾ ಸಂಘಟನೆಗಳು ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.